ಬೆಳಗಾವಿ:ಆ ಕುಂಬಾರ ಕುಟುಂಬ ತಮ್ಮ ಅಜ್ಜನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಆರು ದಶಕಗಳಿಂದ ಗಣೇಶ ಮೂರ್ತಿ ತಯಾರಿಸುವುದನ್ನೇ ಕುಲ ಕಸುಬನ್ನಾಗಿ ಮಾಡಿಕೊಂಡಿದೆ. ವರ್ಷಪೂರ್ತಿ ಅದೇ ಕಾಯಕದಲ್ಲಿ ತೊಡಗುವ ಇವರು, ಈ ಬಾರಿ ಬರೊಬ್ಬರಿ 3 ಲಕ್ಷಕ್ಕೂ ಅಧಿಕ ಮೂರ್ತಿಗಳನ್ನು ತಯಾರಿಸಿ ದಾಖಲೆ ಮೆರೆದಿದ್ದಾರೆ. ಅದು ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳೇ ಎನ್ನುವುದು ಮತ್ತೊಂದು ವಿಶೇಷತೆ.
ರಾಶಿ ರಾಶಿ ಸುಂದರ ಗಣಪತಿಗಳು, ಬೃಹದಾಕಾರದ ಗೋದಾಮುಗಳು, ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕರು. ಹೌದು ಈ ಎಲ್ಲ ದೃಶ್ಯಗಳು ಕಂಡು ಬರುವುದು ಗೋಕಾಕ್ ತಾಲೂಕಿನ ಕೊಣ್ಣುರು ಎನ್ನುವ ಪಟ್ಟಣದಲ್ಲಿ. ಇಲ್ಲಿನ ಶಂಕರಪ್ಪ ಮಲ್ಲಪ್ಪ ಕುಂಬಾರ ಕುಟುಂಬವೇ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಇಡೀ ದೇಶದಲ್ಲೇ ಪ್ರಖ್ಯಾತಿ ಪಡೆದಿದೆ. ಕೇವಲ 40 ಮೂರ್ತಿಗಳಿಂದ ಆರಂಭವಾಗಿ, ಇಂದು 3 ಲಕ್ಷಕ್ಕೂ ಅಧಿಕ ಮೂರ್ತಿಗಳ ತಯಾರಿಸುವಷ್ಟು ಹೆಮ್ಮರವಾಗಿ ಇವರ ಉದ್ಯಮ ಬೆಳೆದು ನಿಂತಿದೆ.
1962ರಲ್ಲಿ ದಿ. ಶಂಕರಪ್ಪ ಮಲ್ಲಪ್ಪ ಕುಂಬಾರ ಅವರು, ತಮ್ಮ ಅಳಿಯ ದಿ. ಸಿದ್ದಪ್ಪ ಕೆಂಚಪ್ಪ ಕುಂಬಾರ ಮತ್ತು ಕುಟುಂಬಸ್ಥರನ್ನು ಸೇರಿಸಿಕೊಂಡು ಶ್ರೀ ಕಾಡಸಿದ್ದೇಶ್ವರ ಇಟ್ಟಂಗಿ ಮತ್ತು ಕುಂಬಾರಿಕೆ ಸಾಮಾನುಗಳ ಉತ್ಪಾದಕರ ಸಹಕಾರಿ ಸಂಘವನ್ನು ಸ್ಥಾಪಿಸುತ್ತಾರೆ. ಈ ಸಂಘದ ಮೂಲಕ ತಮ್ಮ ಕುಂಬಾರಿಕೆ ಕಾಯಕ ಆರಂಭಿಸಿದ ದಿ. ಶಂಕರಪ್ಪ ಅವರು ತಮ್ಮ ಆರು ಮಕ್ಕಳಿಗೆ ಆರು ವಿಭಾಗಗಳಲ್ಲಿ ಗಣೇಶ ಮೂರ್ತಿ ತಯಾರಿಸಲು ಸೂಚಿಸುತ್ತಾರೆ. ತಂದೆಯ ಮಾತನ್ನು ಚಾಚು ತಪ್ಪದೇ ಪಾಲಿಸಿದ ಮಕ್ಕಳು ತಮ್ಮ ಕುಲಕಸುಬು ಮುಂದುವರಿಸುತ್ತಾರೆ.
ಬಳಿಕ ಹಂತ ಹಂತವಾಗಿ ಪ್ರಗತಿ ಕಂಡ ಕುಂಬಾರ ಕುಟುಂಬ ಬೃಹದಾಕಾರದ ಆರು ಘಟಕಗಳನ್ನು ನಿರ್ಮಿಸಿ ಸಂಘದಡಿ ಪ್ರತ್ಯೇಕವಾಗಿ ಮೂರ್ತಿ ತಯಾರಿಸಿ ಪಕ್ಕದ ಮಹಾರಾಷ್ಟ್ರ, ಗೋವಾ ರಾಜ್ಯಗಳು ಹಾಗೂ ರಾಜ್ಯದ ಬೆಂಗಳೂರು, ಬೀದರ, ಚಾಮರಾಜನಗರ, ಮೈಸೂರು, ಹಾಸನ, ಹುಬ್ಬಳ್ಳಿ, ಧಾರವಾಡ ಸೇರಿ ನಾಡಿನ ಮೂಲೆ ಮೂಲೆಗಳಿಗೆ ಮೂರ್ತಿ ಮಾರಾಟ ಮಾಡುತ್ತಿದ್ದಾರೆ. ಉದ್ಯಮ ಬೆಳೆದಂತೆ ಕುಂಬಾರ ಕುಟುಂಬ ಕೂಡ ಬೆಳೆದಿದ್ದು, ಆರು ಮಕ್ಕಳ ಸಂಸಾರ ಇಂದು 60 ಸದಸ್ಯರನ್ನು ಹೊಂದಿದೆ. ಇವರೆಲ್ಲರೂ ಈ ಸಂಘದ ಷೇರುದಾರರಾಗಿದ್ದಾರೆ. ಇನ್ನು ವರ್ಷಪೂರ್ತಿ ಇಲ್ಲಿ ಮೂರ್ತಿ ತಯಾರಿಕೆ ನಡೆಯುವುದು ಇಲ್ಲಿನ ಮತ್ತೊಂದು ವಿಶೇಷತೆ.
ಮೂರ್ತಿ ತಯಾರಿಕೆ ಹೇಗೆ?:ಗೋಕಾಕ್ ತಾಲೂಕಿನ ಪಾಶ್ಚಾಪುರ ಹತ್ತಿರದ ರಾಮಗಾನಟ್ಟಿ, ಹಟ್ಟಿ ಆಲೂರ, ಗುಡಕೇತರ ಸೇರಿ ಇನ್ನಿತರ ಹಳ್ಳಿಗಳಿಂದ ತಂದ ಗುಡ್ಡದ ಕೆಂಪು ಮಣ್ಣನ್ನು ಒಂದು ವರ್ಷ ಹೊರಗಡೆ ಬಿಸಿಲು, ಗಾಳಿಯಲ್ಲಿ ಬಿಡುತ್ತಾರೆ. ನಂತರ ಮಣ್ಣು ಸಣ್ಣಗೆ ಮಾಡಿ ಕಲ್ಲುಗಳನ್ನು ಬೇರ್ಪಡಿಸಿ, ಪಲ್ವರೈಸರ್ ಯಂತ್ರದಲ್ಲಿ ಹಾಕಿ ಮಣ್ಣಿನ ಪೌಡರ್ ಮಾಡುತ್ತಾರೆ. ಆ ಪೌಡರ್ ಅನ್ನು ಚೌಕಾಕಾರದ ಕಟ್ಟೆಗೆ ಹಾಕಿ 24 ಗಂಟೆ ನೀರು ಊಣಿಸುತ್ತಾರೆ. ಇದಾದ ಬಳಿಕ ಮಣ್ಣನ್ನು ಕಾಲಿನಿಂದ ತುಳಿದು ಹದ ಮಾಡಿ, ನೆರಳಿನಲ್ಲಿ ಒಣಗಿಸುತ್ತಾರೆ. ಇದೇ ವೇಳೆ, ಹತ್ತಿಯನ್ನು ಮಿಶ್ರಣ ಮಾಡಲಾಗುತ್ತದೆ. ಮಾರನೇ ದಿನ ಪಗ್ ಮಿಲ್ ಯಂತ್ರದಲ್ಲಿ ಸರಿಯಾಗಿ ಮಿಶ್ರಣ ಮಾಡಿದ ನಂತರ ಹದವಾಗಿ ಬಂದ ಮಣ್ಣನ್ನು ಆಯಾ ಗಾತ್ರದ ಅಚ್ಚುಗಳಿಗೆ ಹಾಕಿ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತದೆ.