ಚಿಕ್ಕೋಡಿ(ಬೆಳಗಾವಿ):ಎರಡು ವರ್ಷದ ಮಗುವಿನ ಮೇಲೆ ಸರ್ಕಾರಿ ಬಸ್ ಒಂದು ಹರಿದು ಸ್ಥಳದಲ್ಲೇ ಮಗು ಮೃತಪಟ್ಟಿರುವ ಧಾರಣ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮೃತ ಮಗುವನ್ನು ಗ್ರಾಮದ ಶ್ಲೋಕ ಅಶೋಕ ತುಳಸಿಗೇರಿ (2) ಎಂದು ಗುರುತಿಸಲಾಗಿದೆ.
ಪರಮಾನಂದವಾಡಿಯಿಂದ ರಾಯಬಾಗ ಪಟ್ಟಣಕ್ಕೆ ತೆರಳುತ್ತಿದ್ದ ಬಸ್ ಇದಾಗಿದ್ದು, ಮಗು ರಸ್ತೆ ದಾಟುವಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಸ್ಥಳೀಯರು ಸರ್ಕಾರಿ ಬಸ್ಸಿನ ಗಾಜುಗಳನ್ನು ಪುಡಿಪುಡಿ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಸ್ಥಳಕ್ಕೆ ಕುಡಚಿ ಪೊಲೀಸರು ಆಗಮಿಸಿ ಪ್ರತಿಭಟನಕಾರರನ್ನು ಸಮಾಧಾನಪಡಿಸಿದರು. ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಅಲ್ಲಿಂದ ಪರಾರಿಯಾಗಿದ್ದು ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಹುಬ್ಬಳ್ಳಿ) ರಸ್ತೆ ದಾಟುತ್ತಿದ್ದ ವ್ಯಕ್ತಿ ಮೇಲೆ ಹರಿದ ವಾಹನ: ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಿನ್ನೆ ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ವಾಹನಗಳು ಹರಿದು ದೇಹ ಸಂಪೂರ್ಣವಾಗಿ ಛಿದ್ರವಾದ ಘಟನೆ ನಡೆದಿದೆ. ಶಿರಗುಪ್ಪಿಯ ನೆಹರು ಪ್ರೌಢಶಾಲೆಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಸುಮಾರು 40-45 ವರ್ಷದ ವ್ಯಕ್ತಿ ಮೇಲೆ ತಡರಾತ್ರಿ ವಾಹನಗಳು ಹರಿದಿದ್ದು, ಮೃತನ ಗುರುತು ಪತ್ತೆಯಾಗಿಲ್ಲ. ಘಟನೆ ಮಾಹಿತಿ ನಂತರ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.