ಅಥಣಿ(ಬೆಳಗಾವಿ):ಪ್ರತಿವರ್ಷವೂ ಹವಾಮಾನ ವೈಪರೀತ್ಯದಿಂದ ದ್ರಾಕ್ಷಿ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ರೈತ ಶ್ರಮಪಟ್ಟು ತಾನೇ ಬೆಳೆಸಿದ ದ್ರಾಕ್ಷಿ ಗಿಡಗಳನ್ನು ಕೈಯಾರೆ ಕೊಡಲಿಯಿಂದ ಕಡಿದು ನಾಶ ಪಡಿಸಿರುವ ಘಟನೆ ಅಥಣಿ ತಾಲೂಕಿನಲ್ಲಿ ನಡೆದಿದೆ.
ಕೋಕಟನೂರ ಗ್ರಾಮದ ಮಹದೇವ ಬಣಜ ಎಂಬ ರೈತ ಕಳೆದ ನಾಲ್ಕು ವರ್ಷಗಳಿಂದ ಎರಡು ಎಕರೆ ಪ್ರದೇಶದಲ್ಲಿ ಬೆಳೆದ ದ್ರಾಕ್ಷಿ ಗಿಡಗಳನ್ನು ನಾಶ ಪಡಿಸಿದ್ದಾರೆ. ಚಿಕ್ಕ ಮಗುವಿನಂತೆ ದ್ರಾಕ್ಷಿ ಬೆಳೆಯನ್ನು ಪೋಷಿಸಿ ಬೆಳೆಸಿದ್ದರು. ಆದರೆ ಪ್ರತಿ ವರ್ಷ ಹವಾಮಾನ ವೈಪರೀತ್ಯ ಹಾಗೂ ಅಕಾಲಿಕ ಮಳೆ ಮತ್ತು ಒಣದ್ರಾಕ್ಷಿಗೆ ಅತಿ ಕಡಿಮೆ ಬೆಲೆ ನಿಗದಿಯಿಂದ ರೈತ ಕಂಗೆಟ್ಟು ಕುಟುಂಬ ವರ್ಗದವರೊಂದಿಗೆ ಸೇರಿ ದ್ರಾಕ್ಷಿ ಗಿಡಗಳನ್ನು ನಾಶ ಪಡಿಸಿದ್ದಾರೆ.