ಚಿಕ್ಕೋಡಿ: ಮಹಾರಾಷ್ಟ್ರದ ಕೊಯ್ನಾ, ಮಹಾಬಲೇಶ್ವರ, ವಾರಣಾ, ನವಜಾ, ರಾಧಾನಗರಿ ಮತ್ತು ಕಾಳಮ್ಮವಾಡಿ ಜಲಾಶಯಗಳಿಂದ ನೀರು ಬಿಡುಗಡೆ ಪ್ರಮಾಣ ಕಡಿಮೆಯಾಗಿದ್ದು, ಕೃಷ್ಣಾ ನದಿ ತೀರದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕೃಷ್ಣಾ ನದಿ ಒಳ ಹರಿವಿನಲ್ಲಿ ಇಳಿಕೆ : ತಮ್ಮ ಕೆಲಸಗಳಿಗೆ ಮುಂದಾದ ಸಾರ್ವಜನಿಕರು ಕೃಷ್ಣಾ ನದಿಗೆ ಈಗಾಗಲೇ ರಾಜಾಪುರ ಬ್ಯಾರೇಜ್‌ನಿಂದ 28,553 ಕ್ಯೂಸೆಕ್ ನೀರು ಹರಿದು ಬರುತ್ತಿದೆ ಹಾಗೂ ದೂಧಗಂಗಾ ವೇದಗಂಗಾ ನದಿಗೆ 8,272 ಕ್ಯೂಸೆಕ್ ಹರಿಯುತ್ತಿದೆ. ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ 36,825 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ.
ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 11,480 ಕ್ಯೂಸೆಕ್ ನೀರು, ವಾರಣಾ ಜಲಾಶಯದಿಂದ 1,701 ಕ್ಯೂಸೆಕ್, ರಾಧಾನಗರಿ ಜಲಾಶಯದಿಂದ 1,400 ಕ್ಯೂಸೆಕ್, ದೂಮ್ ಜಲಾಶಯದಿಂದ 846 ಕ್ಯೂಸೆಕ್ ನೀರು, ಕನೇರ್ ಜಲಾಶಯದಿಂದ 524 ಕ್ಯೂಸೆಕ್ ನೀರು ಸೇರಿದಂತೆ ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 28,553 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಕೃಷ್ಣಾ ನದಿ ಹರಿವಿನಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದ್ದರಿಂದ ಇಲ್ಲಿವರೆಗೆ ಪ್ರವಾಹಕ್ಕೆ ತತ್ತರಿಸಿರುವ ಈ ಭಾಗದ ಜನರು ಈಗ ಹೊಸ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಅಲ್ಲದೆ ತಮ್ಮ ತಮ್ಮ ಕೆಲಸಗಳಿಗೆ ತೆರಳುತ್ತಿದ್ದಾರೆ. ಇನ್ನು, ಸಂಚಾರಕ್ಕೆ ಎಲ್ಲ ಸೇತುವೆಗಳು ಮುಕ್ತವಾಗಿರುವುದು ಜನರ ಸಂಚಾರಕ್ಕೆ ಅನುಕೂಲವಾಗಿದೆ.