ಬೆಳಗಾವಿ:ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಮೇ ತಿಂಗಳ 6 ನೇ ತಾರೀಕು ನಡೆದ ಕೊಲೆಯಿಂದಾಗಿ ಅದಾಗಲೇ ಅನಾಥವಾಗಿದ್ದ ಕುಟುಂಬ ತಂದೆಯಿಲ್ಲದೆ ಮತ್ತೆ ಅನಾಥವಾಗಿದೆ. ಹಾಗಾದ್ರೆ ಯಾವುದು ಆ ಗ್ಯಾಂಗ್?. ಏನದು ಕೊಲೆ ಪ್ರಕರಣ?. ಆ ಗ್ಯಾಂಗ್‌ಗೂ ಈ ಕೊಲೆಗೂ ಏನು ಸಂಬಂಧ ಅಂತೀರಾ ಈ ಸ್ಟೋರಿ ನೋಡಿ..
ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆ ಸೇಡಿಗೆ ಕುಟುಂಬವೊಂದು ಅನಾಥವಾಗಿದೆ..! ಹೌದು, ಅದು ಮೇ ತಿಂಗಳ 6ನೇ ತಾರೀಕು ಮಹಾಮಾರಿ ಕೊರೊನಾ ಭೀತಿ ಹಿನ್ನೆಲೆ ಇಡೀ ದೇಶ ಲಾಕ್‌ಡೌನ್‌ನಿಂದ ಅನ್‌ಲಾಕ್ ಆಗುತ್ತಿದ್ದ ವೇಳೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ವ್ಯಕ್ತಿಯೋರ್ವನ ಮೇಲೆ ದುಷ್ಕರ್ಮಿಗಳ ತಂಡವೊಂದು ಅಟ್ಯಾಕ್ ಮಾಡಿತ್ತು. ಆತನ ಹೆಸರೇ ಸಿದ್ದು ಕನಮಡ್ಡಿ. ದಲಿತ ಸಂಘಟನೆಯೊಂದರ ಮುಖಂಡನಾಗಿದ್ದ ಆತ ಸ್ನೇಹಿತರ ಜೊತೆ ಗೋಕಾಕ್‌ನ ಆದಿಜಾಂಬವ ನಗರ ಬಳಿ ಕುಳಿತುಕೊಂಡಾಗ ಗ್ಯಾಂಗ್ ಒಂದು ಆತನ ಮೇಲೆ ದಾಳಿ ಮಾಡಿತ್ತು. ಆ ದುಷ್ಕರ್ಮಿಗಳು ಮುಖ ಮೂತಿ ನೋಡದೇ ದೇಹವನ್ನೆಲ್ಲಾ ಇರಿದು ಪರಾರಿಯಾಗಿದ್ರು.
ರಕ್ತದ ಮಡುವಿನಲ್ಲಿ ಬಿದ್ದಿದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಆತ ಮೇ 7 ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಸಾವನ್ನಪ್ಪುವ ಮುನ್ನ ಯಾರು ದಾಳಿ ಮಾಡಿದ್ರು ಎಂಬ ಹೇಳಿಕೆಯನ್ನು ಕೊಟ್ಟಿದ್ದ. ಇದಾದ ಬಳಿಕ ಪ್ರಕರಣ ದಾಖಲಿಸಿಕೊಂಡ ಗೋಕಾಕ್ ನಗರ ಠಾಣೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದು, ಸದ್ಯ ಪ್ರಕರಣ ಸಂಬಂಧ 9 ಆರೋಪಿಗಳನ್ನು ಬಂಧಿಸಿ, ಸರ್ಚ್ ವಾರಂಟ್ ಪಡೆದು ಆರೋಪಿಗಳ ಮನೆ ಸೇರಿ ಒಟ್ಟು 12 ಸ್ಥಳಗಳ ರೇಡ್ ಮಾಡಿದ್ದಾರೆ. ಈ ವೇಳೆ ಪಿಸ್ತೂಲ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ 30 ಲಕ್ಷ 48,460 ರೂಪಾಯಿ ಹಣ ಜಪ್ತಿ ಮಾಡಿದ್ದಾರೆ.
ಇನ್ನು ಬಂಧಿತ 9 ಆರೋಪಿಗಳೆಲ್ಲರೂ ಗೋಕಾಕ್ ನಗರ ನಿವಾಸಿಗಳು. ಗಂಗಾಧರ ಸಂತ್ರಾಮ್ ಶಿಂಧೆ(26), ವಿನಾಯಕ ಬಸವರಾಜ್ ಗಡಗಿನಾಳ(22), ವಿಠ್ಠಲ್ ಪರಶುರಾಮ್ ಪವಾರ್(23), ವಿನೋದ ಚಂದ್ರು ಹೊಸಮನಿ(22), ಕಿರಣ್ ವಿಜಯ್ ದೊಡ್ಡನ್ನವರ್(22), ರವಿ ಭೀಮಶಿ ಚುನ್ನನ್ನವರ್(22), ಕೇದಾರಿ ಬಸವಣ್ಣಿ ಜಾಧವ್(36), ಸುನೀಲ್ ಮಲ್ಲಿಕಾರ್ಜುನ್ ಮುರಖಿಭಾವಿ(43), ಸಂತೋಷ್ ಪಾಂಡುರಂಗ ಚಿಗಡೊಳ್ಳಿ (21) ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ 2000 ಕಲಂ 3 ಹಾಗೂ ನಾಲ್ಕರ ಅಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಬಂಧಿತರೆಲ್ಲರೂ ಟೈಗರ್ ಗ್ಯಾಂಗ್ ಸದಸ್ಯರಾಗಿದ್ದು, ಈ ಗ್ಯಾಂಗ್ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.
ಇನ್ನು ಮೇ 6ರಂದು ಕೊಲೆಗೀಡಾದ ಸಿದ್ದು ಕನಮಡ್ಡಿಗೆ ತಂದೆ-ತಾಯಿ ಕುಟುಂಬಸ್ಥರಿಲ್ಲ. ಇನ್ನು ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೂ ಯಾರು ಇರಲಿಲ್ಲ. ಅವರಿಗೊಂದು ಗಂಡು ಮಗು ಕೂಡ ಇತ್ತು. ಆದ್ರೆ, ತಂದೆಯನ್ನು ಕಳೆದುಕೊಂಡ ಆರು ತಿಂಗಳ ಮಗು ಮತ್ತು ಆತನ ಪತ್ನಿ ತ್ರೀವೇಣಿ ಮತ್ತೆ ಅನಾಥವಾಗಿದ್ದಾರೆ. ಕೊಲೆಗೀಡಾದ ಸಿದ್ದು ಕನಮಡ್ಡಿ ಪತ್ನಿ ಹೇಳುವ ಪ್ರಕಾರ ಗಂಡ ಸಿದ್ದು ದಲಿತ ಸಂಘಟನೆ ಅಂತ ಓಡಾಡಿಕೊಂಡಿದ್ದ. ಗಂಡನ ಏಳಿಗೆ ಸಹಿಸಲಾಗದೇ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತಿದ್ದಾರೆ.