ಬೆಳಗಾವಿ:ಕೊರೊನಾ ಸೋಂಕಿತ ವೃದ್ಧ ಚಿಕಿತ್ಸೆ ಸಿಗದೇ ಬೆತ್ತಲಾಗಿ ನೆಲದ ಮೇಲೆ ನರಳಾಡುತ್ತಿದ್ದ ಮನಕುಲಕುವ ಘಟನೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ವೃದ್ಧ ಬೆತ್ತಲಾಗಿ ನರಳಾಡಿದರೂ ಕನಿಕರ ತೋರದ ವೈದ್ಯರು: ಡಿಸಿಎಂ ತವರಲ್ಲೇ ಅಮಾನವೀಯ ಘಟನೆ
ಕೊರೊನಾ ಸೋಂಕಿತ ವೃದ್ಧನೊಬ್ಬ ಸೂಕ್ತ ಚಿಕಿತ್ಸೆ ಸಿಗದೇ ಬೆತ್ತಲಾಗಿ ನೆಲದ ಮೇಲೆ ನರಳಾಡುತ್ತಿದ್ದ ಘಟನೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಜಿಲ್ಲಾಸ್ಪತ್ರೆ ವೈದ್ಯರು ವೃದ್ಧನಿಗೆ ಸೂಕ್ತ ಚಿಕಿತ್ಸೆ ನೀಡಿಲ್ಲ. ಈ ವೃದ್ಧ ಡಿಸಿಎಂ ಲಕ್ಷ್ಮಣ ಸವದಿ ಅವರ ತವರು ತಾಲೂಕು ಅಥಣಿ ಸಮೀಪದ ರಡ್ಡೇನಟ್ಟಿ ಗ್ರಾಮದವರು. 65 ವರ್ಷ ವಯಸ್ಸಿನ ಈ ವ್ಯಕ್ತಿ ಎರಡು ದಿನಗಳ ಹಿಂದೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಬೆಡ್ಗಳ ಕೊರತೆ ಕಾರಣಕ್ಕೆ ಬೀಮ್ಸ್ ಸಿಬ್ಬಂದಿ ನೆಲದ ಮೇಲೆ ಬೆಡ್ ಹಾಕಿ ಮಲಗಿಸಿ ಹೋಗಿದ್ದಾರೆ. ಇನ್ನು ವೃದ್ಧನಿಗೆ ಐದು ಗಂಟೆಗಳ ಕಾಲ ಚಿಕಿತ್ಸೆ ನೀಡಿಲ್ಲ. ಬಳಿಕ ವೃದ್ಧನ ಗಂಟಲು ಸ್ವ್ಯಾಬ್ ಪಡೆದು ಟೆಸ್ಟ್ ಮಾಡಿದಾಗ ಕೊರೊನಾ ಸೋಂಕು ದೃಢಪಟ್ಟಿದೆ.
ಬಳಿಕ ತುರ್ತು ಚಿಕಿತ್ಸಾ ವಿಭಾಗದ ಬಳಿಯ ಕೋವಿಡ್ ವಾರ್ಡ್ಗೆ ವೃದ್ಧನನ್ನು ಶಿಫ್ಟ್ ಮಾಡಲಾಗಿದೆ. ವೃದ್ಧ ಬೆತ್ತಲಾಗಿ ನೋವಿನಿಂದ ಒದ್ದಾಡುತ್ತಿದ್ದರೂ ತಲೆಕೆಡಿಸಿಕೊಳ್ಳದ ಬೀಮ್ಸ್ ಆಡಳಿತ ಮಂಡಳಿ ವಿರುದ್ಧ ವೃದ್ಧನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.