ಚಿಕ್ಕೋಡಿ: ಕರ್ತವ್ಯ ಮುಗಿಸಿಕೊಂಡು ಊರಿನತ್ತ ತೆರಳುತ್ತಿದ್ದ ನಗರದ ಪೊಲೀಸ್ ಠಾಣೆಯ ಪೇದೆಯೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮದ ಹತ್ತಿರ ಸಂಭವಿಸಿದೆ.
ಚಿಕ್ಕೋಡಿ: ಹಸೆಮಣೆ ಏರಬೇಕಿದ್ದ ಪೊಲೀಸ್ ಪೇದೆ ಅಪಘಾತದಲ್ಲಿ ಸಾವು! - Belagavi news
ಇದೇ ತಿಂಗಳ 19ಕ್ಕೆ ಹಸೆಮಣೆ ಏರಬೇಕಿದ್ದ ಪೇದೆಯೊಬ್ಬ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ.
ರಮೇಶ ನಾಯಿಕ (25) ಮೃತಪಟ್ಟ ಪೇದೆ ಎಂದು ತಿಳಿದು ಬಂದಿದೆ. ಪೇದೆ ರಮೇಶ ಕರ್ತವ್ಯ ಮುಗಿಸಿ ಬೈಕ್ನಲ್ಲಿ ತೆರಳುತ್ತಿದ್ದಾಗ ನಾಗರಮುನ್ನೋಳ್ಳಿ ಗ್ರಾಮ ವ್ಯಾಪ್ತಿಯ ಬೆಳಗಲಿ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಪೇದೆ ರಮೇಶನಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಪೇದೆ ರಮೇಶ ಇದೇ ತಿಂಗಳ 19ಕ್ಕೆ ಹಸೆಮಣೆ ಏರಬೇಕಿತ್ತು. ಸಾವಿನ ಸುದ್ದಿ ತಿಳಿದು ಮನೆಯಲ್ಲಿ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ. ಮದುವೆ ಸಂಭ್ರಮದಲ್ಲಿದ್ದ ಪೇದೆಯ ಅಕಾಲಿಕ ಸಾವಿಗೆ ಗ್ರಾಮಸ್ಥರು ಕೂಡ ಕಣ್ಣೀರು ಹಾಕಿದ್ಧಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲಿಸಿದ್ಧಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.