ಬೆಳಗಾವಿ: ನಿರಂತರ ಪರಿಶ್ರಮ, ಶ್ರದ್ಧೆ ಇದ್ದರೆ 'ಅಂಧತ್ವ' ಅಡ್ಡಿಯಾಗುವುದಿಲ್ಲ. ಎಂತಹ ಸವಾಲುಗಳನ್ನು ಕೊಟ್ಟರೂ ಕೂಡ ಅಂದುಕೊಂಡಿದ್ದನ್ನು ಸಾಧಿಸಬಹುದು. ಈ ಮಾತನ್ನು ಬೆಳಗಾವಿ ಮೂಲದ ಅಂಧ ಯುವಕ ಸಾಬೀತು ಮಾಡಿ ತೋರಿಸಿದ್ದಾರೆ. ಎಲ್ಲ ಅಂಗಾಂಗಗಳು ಸರಿ ಇದ್ದರೂ ಅದೇಷ್ಟೋ ಜನರಿಗೆ ಕಂಪ್ಯೂಟರ್ ನಿರ್ವಹಣೆ ಮಾಡಲು ಬರುವುದಿಲ್ಲ. ಆದರೆ, ಈ ಯುವಕ ಅಂಧತ್ವಕ್ಕೆ ಸವಾಲು ಹಾಕಿ, ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು, ಕಂಪ್ಯೂಟರ್ ಮೇಲೆ ಪ್ರಭುತ್ವ ಸಾಧಿಸುವ ಮೂಲಕ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಾರೆ.
ಹೌದು. ಕಣ್ಣು ಕಾಣಿಸದಿದ್ದರೂ ಸರಾಗವಾಗಿ ಕಂಪ್ಯೂಟರ್ನಲ್ಲಿ ಟೈಪಿಂಗ್ ಮಾಡುತ್ತಾ ಇತರರಿಗೆ ಮಾದರಿಯಾಗಿರುವ ಯುವಕ ಕರದಂಟು ನಾಡು ಗೋಕಾಕಿನ ಸುಮಿತ್ ಮೋಟೆಕರ್. ಬೆಳಗಾವಿ ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ)ರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅಂಧತ್ವಕ್ಕೆ ಸವಾಲು ಹಾಕಿ ಸರ್ಕಾರಿ ನೌಕರಿ ಮಾಡುತ್ತಿದ್ದಾರೆ.
‘ನಾನ್ ಡೆಸ್ಕ್ ಟಾಪ್ ವಿಶುವಲ್ ಎಕ್ಸಲ್’ ಎಂಬ ಅಪ್ಲಿಕೇಶನ್ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವ ಸುಮಿತ್, ಕಂಪ್ಯೂಟರ್ ಆನ್ ಮಾಡುವುದು, ಕಡತಗಳನ್ನು ತೆರೆಯುವುದು, ಯಾವ ಕಡತವನ್ನು ಎಡಿಟ್ ಮಾಡಬೇಕು ಎಂಬುದನ್ನು ಅಪ್ಲಿಕೇಶನ್ ಸಹಾಯದಿಂದ ಮಾಡುತ್ತಿದ್ದಾರೆ. ಅವರ ಮೊಬೈಲ್‌ಗೆ ಅಧಿಕಾರಿಗಳು ಕರೆ ಮಾಡಿದರೆ ಯಾವ ಅಧಿಕಾರಿಗಳು ಕರೆ ಮಾಡಿದ್ದಾರೆ ಎಂಬುದನ್ನು ತಿಳಿಯುವುದಕ್ಕೆ ‘ಮೊಬೈಲ್ ಟಾಕ್‌ಬ್ಯಾಕ್‘ ಅಪ್ಲಿಕೇಶನ್ ಅಳವಡಿಸಿಕೊಂಡಿದ್ದಾರೆ. ಈ ಆ್ಯಪ್ ಮೂಲಕ ತಮ್ಮ ಮೊಬೈಲ್ ಗೆ ಬಂದ ಕರೆಗಳನ್ನು ಬೇರೆ ಯಾರ ಸಹಾಯ ಪಡೆದುಕೊಳ್ಳದೇ ಸ್ವತಃ ತಾವೇ ಸೇವ್ ಮಾಡಿಕೊಳ್ಳುತ್ತಾರೆ.
ಕಚೇರಿಯ ಪತ್ರಗಳನ್ನು ಟೈಪ್ ಮಾಡುವುದು, ಕಚೇರಿಯ ಇತರ ಆನ್‌ಲೈನ್ ಅಪ್‌ಡೇಟ್ ಕೆಲಸವನ್ನು ಲೀಲಾಜಾಲವಾಗಿ ಮಾಡುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದ ಸುಮಿತ್ ಅವರು, 2021ರಲ್ಲಿ ಎಸ್‌ಡಿಎ ಆಗಿ ನೇಮಕಗೊಂಡಿದ್ದಾರೆ. ಇದಕ್ಕೂ ಮೊದಲು ಬೆಂಗಳೂರಿನಲ್ಲಿ ‘ಕಂಪ್ಯೂಟರ್ ಇನ್ ಅಡ್ವಾನ್ಸ್ ಕೋರ್ಸ್’ ತರಬೇತಿಯಲ್ಲಿ ಕಂಪ್ಯೂಟರ್ ಆಪ್ಲಿಕೇಶನ್ ಬಗ್ಗೆ ತರಬೇತಿ ಪಡೆದಿದ್ದಾರೆ. ಎಕ್ಸ್‌ಎಲ್ ಅಡ್ವಾನ್ಸ್, ಎಂಎಸ್ ವರ್ಡ್ ಅಡ್ವಾನ್ಸ್, ಇತರ ಅಪ್ಲಿಕೇಶನ್‌ಗಳ ಬಗ್ಗೆ ಆರು ತಿಂಗಳು ತರಬೇತಿ ಪಡೆದಿರುವ ಸುಮಿತ್ ಆರಾಮವಾಗಿ ಕಚೇರಿ ಕೆಲಸ ಮಾಡುತ್ತಾ, ಸ್ವತಂತ್ರವಾಗಿ ತಮ್ಮ ಜೀವನದ ಬಂಡಿ ಸಾಗಿಸುತ್ತಿದ್ದಾರೆ.