ಅಥಣಿ: ಚಲಿಸುತ್ತಿದ್ದ ಬೈಕ್ ಸವಾರನೋರ್ವನ ಕುತ್ತಿಗೆಗೆ ಗಾಳಿಪಟ ಸುತ್ತಿಕೊಂಡು ಅವಾಂತರ ಸೃಷ್ಟಿಸಿದ ಘಟನೆ ನಗರದಲ್ಲಿ ನಡೆಯಿತು. ಘಟನೆಯಲ್ಲಿ ಬೈಕ್ ಸವಾರ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗಾಳಿಪಟ ತಂದ ಆಪತ್ತು; ಪ್ರಾಣಾಪಾಯದಿಂದ ಪಾರಾದ ಬೈಕ್ ಸವಾರ - kite incident 2020
ಏಕಾಏಕಿ ಗಾಳಿಪಟವೊಂದು ಹಾರಿ ಬೈಕ್ ಸವಾರನೋರ್ವನ ಕುತ್ತಿಗೆಗೆ ಸುತ್ತಿಕೊಂಡ ಘಟನೆ ಅಥಣಿಯಲ್ಲಿ ನಡೆದಿದೆ. ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಬೈಕ್ ಸವಾರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬುರಾನ್ ಮುಕ್ಬುಲ್ ಜಮಾದಾರ್ ಎಂಬುವವರು ಸಂಕೇಶ್ವರ-ವಿಜಯಪುರ ಮಾರ್ಗವಾಗಿ ಮನೆಗೆ ತೆರಳುತ್ತಿದ್ದರು. ಅವರು ಹೋಗುತ್ತಿದ್ದ ದಾರಿಯಲ್ಲಿಯೇ ಮಕ್ಕಳು ಗಾಳಿಪಟದೊಂದಿಗೆ ಆಟವಾಡುತ್ತಿದ್ದರು. ಈ ವೇಳೆ ಏಕಾಏಕಿ ಗಾಳಿಪಟವೊಂದು ಹಾರಿ ಅವರ ಕೊರಳಿಗೆ ಸುತ್ತಿಕೊಂಡಿದೆ. ಪರಿಣಾಮ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ಬುರಾನ್, ಸ್ಥಳದಲ್ಲೇ ಬಿದ್ದಿದ್ದಾರೆ. ಇನ್ನು ಗಾಳಿಪಟವು ಕತ್ತಿಗೆಗೆ ಸುತ್ತಿಕೊಂಡಿದ್ದರಿಂದ ಕತ್ತಿನ ಭಾಗದಲ್ಲಿ ಗಾಯವಾಗಿದೆ. ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಬುರಾನ್, ಪ್ರಾಥಮಿಕ ಚಿಕಿತ್ಸೆಗಾಗಿ ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಆಟವಾಡುತ್ತಿದ್ದ ಮಕ್ಕಳು ಓಡಿ ಹೋಗಿದ್ದಾರೆ.
ಪ್ರಾಣಾಪಾಯದಿಂದ ಪಾರಾಗಿರುವ ಬುರಾನ್, ಮಕ್ಕಳು ರಸ್ತೆಯ ಸಮೀಪದಲ್ಲಿ ಈ ರೀತಿ ಗಾಳಿಪಟದ ಜೊತೆ ಆಟ ಆಡದಂತೆ ನೋಡಿಕೊಳ್ಳುವಂತೆ ಸ್ಥಳೀಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಗಾಳಿಪಟದ ಹಾವಳಿ ಹೆಚ್ಚಾಗಿದ್ದರಿಂದ ಗಾಳಿಪಟ ಹಾರಿಸುವವರ ಮೇಲೆ ನಿಗಾ ಇಡುವಂತೆ ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಲ್ಲಿಯೂ ಮನವಿ ಮಾಡಿಕೊಂಡಿದ್ದಾರೆ.