ಬೆಂಗಳೂರು: ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಸಾಮರ್ಥ್ಯವುಳ್ಳ ಪ್ಯಾರಾ ಕ್ರೀಡಾಪಟುಗಳನ್ನೊಳಗೊಂಡಂತೆ 75 ಕ್ರೀಡಾಪಟುಗಳನ್ನು ರಾಜ್ಯದಲ್ಲಿ ಅಮೃತ ಕ್ರೀಡಾ ದತ್ತು ಯೋಜನೆಯಡಿ ಆಯ್ಕೆ ಮಾಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಇಂದು ಬಿಜೆಪಿ ಸದಸ್ಯ ಎಸ್.ರುದ್ರೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಸಹಾಯವಾಗುವಂತೆ ರಾಜ್ಯದ ಕ್ರೀಡಾಪಟುಗಳಿಗೆ 2021-22ನೇ ಸಾಲಿನಿಂದ ಅಮೃತ ಕ್ರೀಡಾ ದತ್ತು ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಒಲಿಂಪಿಕ್ಸ್ ಸೇರಿದಂತೆ ಅಂತರರಾಷ್ಟಿಯ ಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಹೊಂದಿರುವ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ, ಪೋಷಿಸಿ, ಸಾಧನೆಗೆ ಅಗತ್ಯವಾದ ಬೆಂಬಲ ವ್ಯವಸ್ಥೆ ನೀಡುವುದು ಈ ಯೋಜನೆಯ ಗುರಿ. ಈ ಯೋಜನೆಯ ಫಲಾನುಭವಿಗಳಿಗೆ ತರಬೇತಿಗಾಗಿ, ಕ್ರೀಡಾ ವಿಜ್ಞಾನದ ಬೆಂಬಲ, ಪೌಷ್ಟಿಕ ಆಹಾರ, ತರಬೇತಿಗೆ ಅಗತ್ಯವಿರುವ ಕ್ರೀಡಾ ಕಿಟ್ ಖರೀದಿಸಲು, ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು, ದೈನಂದಿನ ಅಗತ್ಯಗಾಗಿ ಮತ್ತು ಇತರೆ ವೆಚ್ಚಗಳಿಗಾಗಿ ತಲಾ ರೂ 10 ಲಕ್ಷ ವಾರ್ಷಿಕ ಗರಿಷ್ಠ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಲಜೀವನ್ ಮಿಷನ್‌ನಡಿ 46.98 ಲಕ್ಷ ಮನೆಗಳಿಗೆ ನಳ ಸಂಪರ್ಕ:ರಾಜ್ಯದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಈವರೆಗೆ 46.98 ಲಕ್ಷ ಮನೆಗಳಿಗೆ ಕಾರ್ಯತ್ಮಕ ನಳ ಸಂಪರ್ಕ ಕಲ್ಪಿಸಲಾಗಿದೆ. 71.50 ಲಕ್ಷ ಗ್ರಾಮೀಣ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.