ಬೆಳಗಾವಿ: ನಗರದ ಜಿಲ್ಲಾ ಮೈದಾನದಲ್ಲಿ 73ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಡಿಸಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಧ್ವಜಾರೋಹಣ ನೆರವೇರಿಸಿ ಗೌರವವಂದನೆ ಸ್ವೀಕರಿಸಿದರು.
ನಂತರ ಮಾತನಾಡಿದ ಡಿಸಿ ಸ್ವಾತಂತ್ರ್ಯಕ್ಕೆ ಹೋರಾಡಿದ ಮಹನೀಯರನ್ನು ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಜಿಲ್ಲೆಯ ಕೊಡುಗೆಯನ್ನು ಸ್ಮರಿಸಿದರು. ಸ್ವಾತಂತ್ರ್ಯ ಸಮರದಲ್ಲಿ ಕರ್ನಾಟಕದ ಪಾತ್ರ ಅದ್ವಿತೀಯ. ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಿಂದ ಆರಂಭಗೊಂಡ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಹುದೊಡ್ಡ ಪರಂಪರೆ ಇದೆ ಎಂದರು.
ಬೆಳಗಾವಿಯಲ್ಲಿ 73ನೇ ಸ್ವಾತಂತ್ರ್ಯೋತ್ಸವ ಸಂಗ್ರಾಮದ ದಿನಗಳಲ್ಲಿ ಸೆರೆಮನೆ ಸೇರಿದ್ದ ಸಾವಿರಾರು ಸಂಖ್ಯೆಯ ಹೋರಾಟಗಾರರಲ್ಲಿ ಉತ್ತರ ಕರ್ನಾಟಕದವರ ಸಂಖ್ಯೆ ಗಣನೀಯ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆದದ್ದು ಕರ್ನಾಟಕದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹಿಡಿದ ಕೈಗನ್ನಡಿ ಎಂದು ಬಣ್ಣಿಸಿದರು.
ದೇಶಪ್ರೇಮ ಅನುರಣಿಸಬೇಕಾದ ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆ ಸೇರಿದಂತೆ ಇಡೀ ರಾಜ್ಯವೇ ಎಂದೂ ಕಂಡರಿಯದ ಪ್ರವಾಹದ ಹೊಡೆತಕ್ಕೆ ಸಿಲುಕಿದ್ದು, ಲಕ್ಷಾಂತರ ಕುಟುಂಬಗಳು ಪುನರ್ವಸತಿಯ ನಿರೀಕ್ಷೆಯಲ್ಲಿವೆ. ಜನರು ಜೀವರಕ್ಷಣೆಗಾಗಿ ಉಟ್ಟ ಬಟ್ಟೆಯಲ್ಲಿಯೇ ಮನೆಗಳನ್ನು ಬಿಟ್ಟು ಬಂದಿರುವ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರ ಸಂತ್ರಸ್ತರ ನೆರವಿಗೆ ಸಮರೋಪಾದಿಯಲ್ಲಿ ಕೆಲಸ ಕಾರ್ಯಗಳನ್ನು ಕೈಗೊಂಡಿದೆ. ಬೆಳಗಾವಿ ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ಮಹಾಮಳೆ, ಪ್ರವಾಹ, ಭೂಕುಸಿತದಿಂದಾಗಿ ಸಂಪೂರ್ಣವಾಗಿ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಐದು ಲಕ್ಷ ರೂಪಾಯಿ ಹಾಗೂ ಮನೆಗಳ ದುರಸ್ತಿಗೆ 1 ಲಕ್ಷ ರೂಪಾಯಿವರೆಗೆ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಬೆಳೆಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೂ ಸರ್ಕಾರ ನಿಲ್ಲಲಿದೆ ಎಂಬ ಭರವಸೆಯನ್ನೂ ಈಗಾಗಲೇ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ಜಿ.ಪಂ. ಸಿಇಒ ಕೆ.ವಿ. ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಲೋಕೇಶಕುಮಾರ್, ಎಸ್.ಪಿ. ಲಕ್ಷ್ಮಣ ನಿಂಬರಗಿ ಭಾಗಿಯಾಗಿದ್ದರು.