ಬೆಳಗಾವಿ: ಕೋವಿಡ್ - 19 ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ನಗರದ ಬಿಮ್ಸ್ ಆಸ್ಪತ್ರೆಯ 07 ಶುಶ್ರೂಷಕಿಯರನ್ನು ಬಿಮ್ಸ್ ಜಿಲ್ಲಾ ಸರ್ಜನ್ ಡಾ. ಹುಸೇನ್ ಸಾಬ್ ಖಾಜಿ ಬಿಡುಗಡೆಗೊಳಿಸಿ ಆದೇಶ ಹೊರಡಸಿದ್ದಾರೆ.
ಬಿಮ್ಸ್ನಿಂದ 7 ಶುಶ್ರೂಷಕಿಯರ ಬಿಡುಗಡೆ ನಗರದ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ಡಿಸಿಎಂ ಲಕ್ಷ್ಮಣ ಸವದಿ, ಬಿಮ್ಸ್ ಅವ್ಯವಸ್ಥೆ ಕಂಡು ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದರು. ಅವರು ಭೇಟಿ ನೀಡಿದ ಸಂದರ್ಭದಲ್ಲಿ ಕೋವಿಡ್ ಸೋಂಕಿತರ ಪಕ್ಕದಲ್ಲಿ ಮೃತ ರೋಗಿಯ ಶವ ಇಟ್ಟುಕೊಂಡಿದ್ದು ಕಣ್ಣಿಗೆ ಬಿದ್ದಿತ್ತು.
ಇದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಡಿಸಿಎಂ ಸವದಿ, ಬಿಮ್ಸ್ ಆಡಳಿತ ಅಧಿಕಾರಿಗಳಿಗೆ ಕೈ ಮುಗಿದು ಸುಧಾರಣೆಗೆ ಆದ್ಯತೆ ನೀಡುವಂತೆ ಮನವಿ ಮಾಡಿಕೊಂಡಿದ್ದರು.
ಇದೀಗ ಎಚ್ಚೆತ್ತ ಜಿಲ್ಲಾಸ್ಪತ್ರೆ ಸರ್ಜನ್ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಏಳು ಶುಶ್ರೂಷಕರನ್ನು ಬಿಡುಗಡೆಗೊಳಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಶುಶ್ರೂಷಾಧಿಕಾರಿಗಳಾದ ವಿದ್ಯಾವತಿ ಪ್ರಧಾನ, ಸುಜಾತಾ ಬತ್ತುಲಾ ಹಾಗೂ ಶುಶ್ರೂಷಾಧಿಕಾರಿಗಳಾದ ಜಯಲಕ್ಷ್ಮಿ ಪತ್ತಾರ, ಶೈಲಜಾ ಕುಲಕರ್ಣಿ, ಸುಶೀಲಾ ಶೆಟ್ಟಿ, ಸವಿತಾ ತಮ್ಮಣ್ಣಾಚೆ ಅವರನ್ನು ಬಿಡುಗಡೆಗೊಳಿಸಿದ್ದಾರೆ.
ಅದಕ್ಕೆ ಕಾರಣ ಕೊಟ್ಟಿರುವ ಸರ್ಜನ್, ಡಿಸಿಎಂ ಭೇಟಿ ನೀಡಿದಾಗ ಮೃತ ಕೋವಿಡ್ ರೋಗಿಯ ಶವವನ್ನು ವಾರ್ಡ್ನಿಂದ ಶವಾಗಾರಕ್ಕೆ ಸಾಗಿಸದೇ ಸೋಂಕಿತರ ಪಕ್ಕದಲ್ಲೇ ಇಟ್ಟುಕೊಂಡು ಕರ್ತವ್ಯ ಲೋಪ ಎಸಗಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆದ್ರೆ, ಕೋವಿಡ್ ವಾರ್ಡ್ಗೆ ಭೇಟಿ ನೀಡದೆ ಹೊರಗೆ ತಿರುಗುತ್ತಿರುವ ಪ್ರಭಾವಿ ವೈದ್ಯರ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಅನೇಕ ಸಂದೇಹಗಳಿಗೆ ಆಸ್ಪದ ಮಾಡಿಕೊಟ್ಟಿದೆ.
ಇದನ್ನೂ ಓದಿ:ಕೈ ಮುಗಿಯುತ್ತೇನೆ, ಮಾನವ ಧರ್ಮದ ಆಧಾರದ ಮೇಲೆ ಜನರ ಪ್ರಾಣ ರಕ್ಷಿಸಿ: ವೈದ್ಯರಿಗೆ ಡಿಸಿಎಂ ಮನವಿ
ಶುಶ್ರೂಷಕಿಯರು ಹೇಳುವಂತೆ, ಡಿಸಿಎಂ ಲಕ್ಷ್ಮಣ ಸವದಿ ಬಂದಾಗ 05 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದರು. ಅದರಲ್ಲಿ ಎರಡು ಶವವನ್ನು ಶವಾಗಾರಕ್ಕೆ ಕಳುಹಿಸಲಾಗಿತ್ತು. ಡಿಸಿಎಂ ಅವರು ಬಂದಾಗ ಇನ್ನೂ ಮೂರು ಶವಗಳಿದ್ದವು.
ಹೀಗಾಗಿ, ನಮಗೆ ಮೊದಲು ನೋಟಿಸ್ ಕೊಟ್ಟು ಇದೀಗ ಬಿಡುಗಡೆಗೊಳಿಸಿದ್ದಾರೆ. ಆದ್ರೆ, ಸರ್ಜನ್ ಡಾ. ಹುಸೇನ್ ಸಾಬ್ ಖಾಜಿ ಅವರು ನಮ್ಮನ್ನು ಬಿಡುಗಡೆಗೊಳಿಸುವಲ್ಲಿ ತಾರತಮ್ಯ ಮಾಡಿದ್ದಾರೆ.
ಬಿಮ್ಸ್ ಸಿಬ್ಬಂದಿ, ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದಲ್ಲದೇ ನಮ್ಮ ಹೆಚ್ಎಫ್ಡಬ್ಲ್ಯೂದವರಿಗೆ ಕಿರುಕುಳ ನೀಡಲಾಗುತ್ತಿದೆ. ಬೆಳಗ್ಗೆ 8ಕ್ಕೆ ಬಂದ್ರೆ ರಾತ್ರಿ 8 ಗಂಟೆವರೆಗೆ ಕೆಲಸ ಮಾಡುತ್ತೇವೆ. ಆದರೂ ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ಶುಶ್ರೂಷಕಿಯರು ಆರೋಪ ಮಾಡಿದರು.
ಇತ್ತ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಜೂನ್ 4ರಂದು ಸಿಎಂ ಭೇಟಿ ನೀಡಲಿರುವ ಹಿನ್ನೆಲೆ ಬಿಮ್ಸ್‌ನಲ್ಲಿ ಹಲವಾರು ಬೆಳವಣಿಗೆಗಳು ನಡೆಯುತ್ತಿದ್ದು, ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ನರ್ಸಿಂಗ್ ಸ್ಟಾಫ್ಗಳ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. ಇದಲ್ಲದೇ ಕೋವಿಡ್ ವಾರ್ಡ್ಗೆ ಈವರೆಗೂ ಭೇಟಿ ನೀಡದ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಕ್ರಮವೇನು? ಎಂದು ಸೋಂಕಿತರ ಸಂಬಂಧಿಗಳು ಪ್ರಶ್ನಿಸುತ್ತಿದ್ದಾರೆ.