ಬೆಳಗಾವಿ: ಭಾಷೆ ತಿಳಿದಿದ್ದರೂ ತಿಳಿಯದಂತೆ ನಟಿಸುವ ಜನರ ಮಧ್ಯೆ ಇಲ್ಲೊಬ್ಬ ಯುವಕ ತನ್ನ ರಕ್ತದ ಮೂಲಕ ಕೃತಿಯನ್ನ ರಚಿಸಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿ ಮೊದಲ ಆದ್ಯತೆ ಸಿಗಬೇಕೆಂದು ಆಗ್ರಹಿಸಿ ಸುಮಾರು 650 ಕಿಮೀ ಪಾದಯಾತ್ರೆ ನಡೆಸುವ ಕಾರ್ಯ ಕೈಗೊಂಡಿದ್ದಾರೆ.
ಶಿಗ್ಗಾಂವಿ ತಾಲೂಕಿನ ಮುಗಳಿ ಗ್ರಾಮದ ಮಂಜುನಾಥ ತಿಪ್ಪಣ್ಣ ಭದ್ರಶೆಟ್ಟಿ ಎಂಬುವರೇ ಈ ಅಪ್ಪಟ ಕನ್ನಡಪ್ರೇಮಿ. ಇವರು ಬಿಎ, ಬಿಇಡಿ ಪದವಿ ಮುಗಿಸಿ ಸದ್ಯ ಹಾವೇರಿ ಜಿಲ್ಲೆಯಲ್ಲಿರುವ ಗೊಟಗೂಡಿ ಜಾನಪದ ವಿಶ್ವವಿದ್ಯಾಲಯದಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದಾರೆ. ಇದರ ಜೊತೆಗೆ ಕುಟುಂಬ ನಿರ್ವಹಣೆಗೆ ಚಿಕ್ಕಬಳ್ಳಾಪುರ ಮೆಗಾ ಡೈರಿಯಲ್ಲಿ ಕೆಲಸ ಕೂಡ ಮಾಡುತ್ತಿದ್ದಾರೆ. ಕನ್ನಡ ನಾಡು, ನುಡಿ ಉಳಿಸಿ - ಬೆಳೆಸಲು ಸುಮಾರು 650 ಕಿಮೀ ಪಾದಯಾತ್ರೆ ಹಮ್ಮಿಕೊಂಡಿದ್ದು, ದಾರಿಯುದ್ಧಕ್ಕೂ ಕನ್ನಡ ಭಾಷೆಯ ಮಹತ್ವವನ್ನು ಸಾರುತ್ತಿದ್ದಾರೆ. ಇಂದು ಬೆಳಗಾವಿಗೆ ಆಗಮಿಸಿದ ಇವರನ್ನು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿಯವರು ಅದ್ಧೂರಿಯಾಗಿ ಬರಮಾಡಿಕೊಂಡು ಶುಭಹಾರೈಸಿದರು.