ಬೆಳಗಾವಿ: ನಗರದಲ್ಲಿ ಮೂರು ದಿನ ಕಾಲ ಹಮ್ಮಿಕೊಂಡಿರುವ 64ನೇ ಫಲಪುಷ್ಪ ಪ್ರದರ್ಶನಕ್ಕೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾನುವಾರ ವೀಕೆಂಡ್ ಇರುವ ಹಿನ್ನೆಲೆ ಅಪಾರ ಸಂಖ್ಯೆಯಲ್ಲಿ ಜನ ಆಗಮಿಸಿ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಂಡರು.
ಹೌದು, ಬೆಳಗಾವಿ ಹ್ಯೂಮ್ ಪಾರ್ಕ್ನಲ್ಲಿ ಜಿಪಂ, ತೋಟಗಾರಿಕೆ ಇಲಾಖೆ, ಕೃಷಿ , ಗ್ರಾಮೀಣ ಮತ್ತು ಸಣ್ಣ ಉದ್ಯಮ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ 64ನೇ ಫಲಪುಷ್ಪ ಪ್ರದರ್ಶನ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ವಿವಿಧ ಹೂವುಗಳಿಂದ ತಯಾರಿಸಿದ್ದ ಕೃತಿಗಳು ಎಲ್ಲರ ಗಮನ ಸೆಳೆದವು.
ಹೂವಿನಲ್ಲಿ ಅರಳಿದ ಬೆಳಗಾವಿಯ ಪ್ರಸಿದ್ಧ ಕಮಲ ಬಸದಿ, ಶಾವಿಗೆಯಲ್ಲಿ ಅರಳಿರುವ ಸಿದ್ದೇಶ್ವರ ಸ್ವಾಮೀಜಿ, ಸಿರಿಧಾನ್ಯಗಳಿಂದ ಸಿದ್ಧಪಡಿಸಿರುವ ವೀರರಾಣಿ ಚೆನ್ನಮ್ಮನ ಮೂರ್ತಿ, ಮರಳಿನಿಂದ ನಿರ್ಮಿಸಿರುವ ಚಂದ್ರಯಾನ-3, ರಂಗೋಲಿಯಲ್ಲಿ ಬಿಡಿಸಿರುವ ನಾಟ್ಯಭೂಷಣ ಏಣಗಿ ಬಾಳಪ್ಪ, ಗಾನ ಕೋಗಿಲೆ ಗಂಗೂಬಾಯಿ ಹಾನಗಲ್, ವರಕವಿ ದ.ರಾ. ಬೇಂದ್ರೆ, ಕಾಯಕ ಯೋಗಿ ಸಿದ್ಧಗಂಗಾ ಸ್ವಾಮೀಜಿ, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ, ತೋಟಗಾರಿಕಾ ಪಿತಾಮಹ ಎಂ.ಎಚ್. ಮರಿಗೌಡ ಅವರ ಭಾವಚಿತ್ರಗಳು ಸೇರಿ ಮತ್ತಿತರ ಕಲಾಕೃತಿಗಳು ಜನರ ಮನಸೂರೆಗೊಳಿಸುತ್ತಿವೆ.
ವಿವಿಧ ಅಲಂಕಾರಿಕ ಹೂವು ಪ್ರದರ್ಶನ:ಕುಂದಾನಗರಿ ಜನ ಇಂದು ಸಂಡೇ ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸಿ ತಮ್ಮ ಮನಸ್ಸನ್ನು ಹಗುರಗೊಳಿಸಿದರು. ಇಲ್ಲಿನ ಆಹ್ಲಾದಕರ ವಾತಾವರಣ ಸವಿದರು. ಕುಟುಂಬ ಸಮೇತರಾಗಿ ಸೆಲ್ಫಿ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಗುಲಾಬಿ, ಸೇವಂತಿ, ಚೆಂಡು ಹೂವು, ಜರ್ಬೆರಾ, ಅಂಥೂರಿಯಂ, ಆರ್ಕಿಡ್ಸ್, ಸಾಲ್ವಿಯಾ, ಪೆಟೂನಿಯಾ, ಜಿರೇನಿಯಂ, ಡಯಾಂತಸ್, ಹೈಪೋಸ್ಟಸ್ ಸೇರಿ 25ಕ್ಕೂ ಹೆಚ್ಚು ಅಲಂಕಾರಿಕ ಹೂವು ಮತ್ತು ಹೂವಿನ ಸಸಿಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.
ಪುಷ್ಪ ಪ್ರದರ್ಶನ ವೀಕ್ಷಿಸಲು ಬಂದಿದ್ದ ಶಾಲಿನಿ ಮತ್ತು ಶಿವಪ್ರಸಾದ ದಂಪತಿ ಮಾಧ್ಯಮದವರೊಂದಿಗೆ ಮಾತನಾಡಿ, ಫಲಪುಷ್ಪ ಪ್ರದರ್ಶನಕ್ಕೆ ಪ್ರತಿ ವರ್ಷ ಬರುತ್ತೇವೆ. ಈ ಬಾರಿ ತುಂಬಾ ಕಲರ್ ಫುಲ್ ಮಾಡಿದ್ದಾರೆ. ಇಲ್ಲಿನ ಸುಂದರ ಹೂವಿನ ಕಲಾಕೃತಿಗಳ ಮುಂದೆ ಫೋಟೋ ತೆಗೆಸಿಕೊಂಡು ಸಖತ್ ಎಂಜಾಯ್ ಮಾಡಿದೆವು. ಕರ್ನಾಟಕ ಭೂಪಟ, ಶಾವಿಗೆಯ ಸಿದ್ದೇಶ್ವರ ಸ್ವಾಮೀಜಿ ತುಂಬಾ ಚೆನ್ನಾಗಿವೆ ಎಂದರು.