ಕರ್ನಾಟಕ

karnataka

ETV Bharat / state

ಬೆಳಗಾವಿ ಜಿಲ್ಲೆಯ 6 ಶಾಸಕರಿಂದ ಚೊಚ್ಚಲ ಬಾರಿ‌ಗೆ ವಿಧಾನಸಭೆಗೆ ಪ್ರವೇಶ - new mlas entering assembly

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಆರು ಮಂದಿ ಶಾಸಕರು ಪ್ರಥಮ ಬಾರಿಗೆ ಗೆದ್ದು ವಿಧಾನಸಭೆಗೆ ಪ್ರವೇಶ ಮಾಡುತ್ತಿದ್ದಾರೆ.

6-mlas-from-belagavi-entered-assembly-for-the-first-time
ಚೊಚ್ಚಲ ಬಾರಿ‌ಗೆ ವಿಧಾನಸಭೆ ಪ್ರವೇಶಿಸಿದ ಬೆಳಗಾವಿ ಜಿಲ್ಲೆಯ 6 ಶಾಸಕರು

By

Published : May 15, 2023, 11:08 AM IST

ಬೆಳಗಾವಿ:ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳ ಶಾಸಕರು ಮೊದಲ ಬಾರಿಗೆ ಗೆದ್ದು ವಿಧಾನಸಭೆಗೆ ಪ್ರವೇಶಿಸುವ ಮೂಲಕ‌ ರಾಜ್ಯದ ಗಮನ ಸೆಳೆದಿದ್ದಾರೆ. ರಾಜಕೀಯ ಪವರ್​ ಸೆಂಟರ್​ ಎಂದೇ ಬಿಂಬಿತವಾಗಿರುವ ಬೆಳಗಾವಿಯಲ್ಲಿ ಈ ಬಾರಿ ಕೆಲ ಪ್ರಭಾವಿಗಳು ಪರಾಭವಗೊಂಡಿದ್ದು, ಹೊಸ ತಲೆಮಾರಿನ ನಾಯಕರು ಗೆದ್ದಿರುವುದು ವಿಶೇಷವಾಗಿದೆ.

ಬಾಬಾಸಾಹೇಬ ಪಾಟೀಲ:ವೀರ ವನಿತೆ ಚನ್ನಮ್ಮನ ನಾಡು ಕಿತ್ತೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾಗಿರುವ ಬಾಬಾಸಾಹೇಬ ಪಾಟೀಲ (77,536 ಮತ) ಇದೇ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರವಾಗಿ ಸ್ಪರ್ಧಿಸಿ ಸೋತಿದ್ದರು. ಈ ಸಲ ಕಾಂಗ್ರೆಸ್ ಟಿಕೆಟ್ ಪಡೆದು ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ (74,543 ಮತ) ವಿರುದ್ಧ 2,993 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಮಾಜಿ ಸಚಿವ ದಿ. ಡಿ.ಬಿ. ಇನಾಮದಾರ್ ಅವರ ಸಂಬಂಧಿಯೂ ಆಗಿರುವ ಬಾಬಾಸಾಹೇಬ ಪಾಟೀಲರಿಗೆ ಜಿ.ಪಂ. ಸದಸ್ಯರಾಗಿ ಕೆಲಸ ಮಾಡಿದ ಅನುಭವವಿದೆ. ಚುನಾವಣೆಗೂ ಮುನ್ನ ಮಾಜಿ ಸಚಿವ ಡಿ.ಬಿ. ಇನಾಮದಾರ್ ಅನಾರೋಗ್ಯದಿಂದ ಮೃತರಾಗಿದ್ದರು.

ತಂದೆ ಸ್ಥಾನ ತುಂಬಿದ ನಿಖಿಲ್ ಕತ್ತಿ:ಹುಕ್ಕೇರಿ ಕ್ಷೇತ್ರದಲ್ಲಿ ದಿ. ಉಮೇಶ ಕತ್ತಿಯವರ ಸ್ಥಾನ ತುಂಬುವಲ್ಲಿ ಅವರ ಪುತ್ರ ನಿಖಿಲ್ ಕತ್ತಿ (1,03,500 ಮತ) ಯಶಸ್ವಿಯಾಗಿದ್ದಾರೆ. ತಾವೆದುರಿಸಿದ ಮೊದಲ ಚುನಾವಣೆಯಲ್ಲೆ ಹಳೆ ಹುಲಿ ಮಾಜಿ ಸಚಿವ ಎ.ಬಿ. ಪಾಟೀಲರನ್ನು (61,013 ಮತ) 42,487 ಮತಗಳಿಂದ ಸೋಲಿಸಿ, ವಿಧಾನಸಭೆ ಪ್ರವೇಶಿಸಿದ್ದಾರೆ. 8 ಬಾರಿ ಹುಕ್ಕೇರಿ ಕ್ಷೇತ್ರದಿಂದ ಗೆದ್ದಿದ್ದ ತಂದೆಯವರ ಗೆಲುವಿನ ನಾಗಾಲೋಟವನ್ನು ನಿಖಿಲ್ ಮುಂದುವರೆಸಿದ್ದಾರೆ. ಜಿ‌.ಪಂ.‌ ಸದಸ್ಯರಾಗಿ ಸೇವೆ ಸಲ್ಲಿಸಿರುವ ನಿಖಿಲ್ ಬಾಲ್ಯದಿಂದಲೇ ತಂದೆ ಉಮೇಶ ಕತ್ತಿಯವರ ರಾಜಕೀಯ ಪಟ್ಟು ನೋಡಿಕೊಂಡು ಬಂದವರು. ಭವಿಷ್ಯದಲ್ಲಿ ಯುವ ನಾಯಕನಾಗಿ ವಿಧಾನಸಭೆಯಲ್ಲಿ ಗಮನ ಸೆಳೆಯುವ ಭರವಸೆ ಮೂಡಿಸಿದ್ದಾರೆ. ಜೊತೆಗ ಕತ್ತಿ ಕುಟುಂಬದ ಮೂರನೇ ತಲೆಮಾರು ವಿಧಾನಸಭೆ ಪ್ರವೇಶಿಸಿದಂತಾಗಿದೆ.

ವಿಧಾನಸಭೆಗೆ ವಿಶ್ವಾಸ ವೈದ್ಯ:ಕಳೆದ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಆನಂದ ಮಾಮನಿ ವಿರುದ್ಧ ಸೋತಿದ್ದ ವಿಶ್ವಾಸ ವೈದ್ಯ (71,224 ಮತ) ಈ ಸಲ ಗೆಲುವಿನ ನಗೆ ಬೀರಿದ್ದಾರೆ. ದಿ. ಆನಂದ ಮಾಮನಿ ಅಗಲಿಕೆಯಿಂದಾಗಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಅವರ ಪತ್ನಿ ರತ್ನಾ ಮಾಮನಿ (56,529 ಮತ) ವಿರುದ್ಧ ವೈದ್ಯ 14,695 ಮತಗಳ ಅಂತರದ ಗೆಲುವು ಕಂಡಿದ್ದಾರೆ. ಈ ಮೂಲಕ ತಮ್ಮ ಎರಡನೇ ಪ್ರಯತ್ನದಲ್ಲೆ ವಿಧಾನಸಭೆ ಪ್ರವೇಶಿಸಿದ್ದಾರೆ. ಹಲವು ದಶಕಗಳಿಂದ ಸವದತ್ತಿಯಲ್ಲಿ ಮಾಮನಿ ಮನೆತನ ಹೊಂದಿದ್ದ ಪಾರುಪತ್ಯ ಕೊನೆಯಾಗಿದೆ.

ಅಣ್ಣ ಸೋತಿದ್ದ ಕ್ಷೇತ್ರದಲ್ಲಿ ಗೆದ್ದ ತಮ್ಮ:2018ರ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಿಂದ ಸೋತಿದ್ದ ಫಿರೋಜ್ ಸೇಠ್, ಈ ಬಾರಿ ತಮ್ಮ ಸಹೋದರ‌ ಆಸೀಫ್(ರಾಜು)ಸೇಠ್​ರನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿ ಕೊಟ್ಟಿದ್ದಾರೆ. ಫಿರೋಜ್ ಸೇಠ್ ಬದಲು ಈ ಬಾರಿ ರಾಜು ಸೇಠ್​ಗೆ (68,863 ಮತ) ಕೈ ಟಿಕೆಟ್ ನೀಡಲಾಗಿತ್ತು. ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ (64,312 ಮತ) ವಿರುದ್ಧ 4,551 ಮತಗಳಿಂದ ಗೆದ್ದಿರುವ ರಾಜು ಸೇಠ್ ಮೊದಲ ಬಾರಿ‌ಗೆ ಶಾಸಕರಾಗಿದ್ದಾರೆ. ಫಿರೋಜ್ ಸೇಠ್ ಎರಡು ಬಾರಿ ಶಾಸಕರಾಗಿದ್ದಾಗ ಅವರ ಜೊತೆ ಕೆಲಸ ಮಾಡಿದ ಅನುಭವ ರಾಜು ಸೇಠ್​​ಗೆ ಅವರಿಗಿದೆ.

ನಿಂಬಾಳ್ಕರ್ ಸೋಲಿಸಿದ ಹಲಗೇಕರ್:ಕಳೆದ ಬಾರಿ ಖಾನಾಪುರ ಕ್ಷೇತ್ರದಿಂದ ಕಾಂಗ್ರೆಸ್​​ನ ಡಾ. ಅಂಜಲಿ ನಿಂಬಾಳ್ಕರ್ (37,205 ಮತ) ವಿರುದ್ಧ ಸೋತಿದ್ದ ಬಿಜೆಪಿಯ ವಿಠಲ ಹಲಗೇಕರ್ (91,834 ಮತ) ಈ ಬಾರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಚೊಚ್ಚಲ ಬಾರಿಗೆ ವಿಧಾನಸಭೆಗೆ ಕಾಲಿಟ್ಟಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಹಲಗೇಕರ್ ಖಾನಾಪುರ ಲೈಲಾ ಶುಗರ್ಸ್ ಕಾರ್ಖಾನೆ ನಡೆಸುತ್ತಿದ್ದಾರೆ. ಖಾನಾಪುರ ಬಿಜೆಪಿ ಟಿಕೆಟ್​​ಗಾಗಿ ಬಹಳಷ್ಟು ಆಕಾಂಕ್ಷಿಗಳಿದ್ದರು. ಆದರೆ ಅಂತಿಮವಾಗಿ ಹಲಗೇಕರ್​​ಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿತ್ತು. ಬಿಜೆಪಿ ನಾಯಕರ ಒಗ್ಗಟ್ಟಿನಿಂದ 54,629 ಮತಗಳ ಭರ್ಜರಿ ಅಂತರದಲ್ಲಿ ಅಂಜಲಿ ನಿಂಬಾಳ್ಕರ್​​ಗೆ ಸೋಲಿನ ರುಚಿ ತೋರಿಸಿದ್ದಾರೆ.

ಪಿ. ರಾಜೀವ್​​ ವಿರುದ್ಧ ಗೆದ್ದ ಮಹೇಂದ್ರ: ಕುಡಚಿ ಮತಕ್ಷೇತ್ರಕ್ಕೆ ಪ್ರಚಾರಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಮಿಸಿದ್ದರು. ಆದರೂ ಇಲ್ಲಿನ ಮತದಾರ ಪ್ರಭುಗಳು ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಕಳೆದ ಬಾರಿ ಪಕ್ಷೇತರವಾಗಿ ಸ್ಪರ್ಧಿಸಿ ಸೋತಿದ್ದ ಮಹೇಂದ್ರ ಈ ಬಾರಿ ಬಿಜೆಪಿ ಶಾಸಕ ಪಿ. ರಾಜೀವ್​​ ಅವರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿದ್ದಾರೆ.

ABOUT THE AUTHOR

...view details