ಬೆಳಗಾವಿ:ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ಶಿವಕುಮಾರ್ ಉಪ್ಪಾರ್ ಎಂಬ ಯುವಕ ಅನುಮಾನಾಸ್ಪದವಾಗಿ ಸಾವಿಗೀಡಾದ ಯುವಕ. ಈ ಯುವಕನ ಕುಟುಂಬಕ್ಕೆ 'ಉತ್ತರ ಕರ್ನಾಟಕ ಮಂದಿ' ಫೇಸ್‌ಬುಕ್ ಪೇಜ್ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ದೇಣಿಗೆ ನೀಡುವ ಮುಖಾಂತರ ಮಾನವೀಯತೆ ಮೆರೆಯಲಾಗಿದೆ.
ಗೋ ರಕ್ಷಣೆಯಲ್ಲಿ ತೊಡಗಿಕೊಂಡಿದ್ದ ಶಿವು ಉಪ್ಪಾರ್ ಕೆಲವು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ ಎಪಿಎಂಸಿ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದ. ಮನೆಯ ಆಧಾರ ಸ್ಥಂಭವಾಗಿದ್ದ ಯುವಕನನ್ನು ಕಳೆದುಕೊಂಡ ಕುಟುಂಬ ತೀವ್ರ ಸಂಕಷ್ಟದಲ್ಲಿತ್ತು. ಈ ಸಂಕಷ್ಟ ಗಮನಿಸಿದ ಉತ್ತರ ಕರ್ನಾಟಕ ಮಂದಿ ಎಂಬ ಹೆಸರಿನ ಫೇಸ್‌ಬುಕ್ ಪುಟ ಧನ ಸಹಾಯ ಮಾಡಲು ಮುಂದಾಗಿತ್ತು. ಕಳೆದ ಒಂದು ವಾರದಲ್ಲಿ ಸುಮಾರು 6 ಲಕ್ಷದ 14 ಸಾವಿರ ಹಣವನ್ನು ಸಂಗ್ರಹಿಸಿ ಯುವಕನ ತಂದೆ ತಾಯಿಗೆ ಹಸ್ತಾಂತರಿಸಲಾಗಿದೆ.