ಬೆಂಗಳೂರು:"ಡಿ.4ರಿಂದ 15ರವರೆಗೆ 10 ದಿನಗಳ ಕಾಲ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್‌ನಲ್ಲಿ 57 ಗಂಟೆ 45 ನಿಮಿಷಗಳ ಕಾಲ ಆರೋಗ್ಯಕರ ಕಲಾಪ ನಡೆಯಿತು. ಆ ಪೈಕಿ ಗದ್ದಲ ಹಾಗೂ ಧರಣಿಗಾಗಿ ಒಟ್ಟು 4 ಗಂಟೆ 30 ನಿಮಿಷಗಳನ್ನು ವ್ಯಯಿಸಲಾಗಿದೆ" ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ವಿಧಾನ ಪರಿಷತ್ ಕಲಾಪದ ಕಡೆಯ ದಿನ ಉತ್ತರ ಕರ್ನಾಟಕದ ಚರ್ಚೆಗೆ ಸರ್ಕಾರದ ಉತ್ತರದ ನಂತರ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಮೊದಲು ಕಲಾಪದ ಕುರಿತು ಸಭಾಪತಿ ಹೊರಟ್ಟಿ ಸದನಕ್ಕೆ ಸಮಗ್ರ ಮಾಹಿತಿ ನೀಡಿದರು.
"ಕಳೆದ ಅಧಿವೇಶನದಿಂದೀಚೆಗೆ ನಿಧನರಾದ ಒಟ್ಟು 11 ಗಣ್ಯರುಗಳಿಗೆ, ಸೇನಾ ಕ್ಯಾಪ್ಟನ್ ಪ್ರಾಂಜಲ್ ಸೇರಿದಂತೆ ಕ್ಯಾಪ್ಟನ್ ಶುಭಂ ಗುಪ್ತಾ, ಹವಲ್ದಾರ ಅಬ್ದುಲ ಮಜಿಕ್, ಲಾನ್ಸ್ ನಾಯ್ಕ್ ಸಂಜಯ್ ಬಿಸ್ಟ್ ಮತ್ತು ಸಚಿನ್ ಲಾರ್ ಹಾಗೂ ಇತರ ವೀರ ಯೋಧರುಗಳಿಗೆ ಮತ್ತು ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾಗಿದ್ದ ಅರ್ಜುನನಿಗೆ ಸದನವು ತನ್ನ ಸಂತಾಪವನ್ನು ವ್ಯಕ್ತಪಡಿಸಿತು. ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿಯವರಿಂದ ಹಾಗೂ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಕಾರ್ಯದರ್ಶಿಯವರು ಮಂಡಿಸಿದರು. ಸಭೆಯ ಮುಂದಿಡಲಾಗುವ ಕಾಗದ ಪತ್ರಗಳ 01 ಮತ್ತು 02 ಪಟ್ಟಿಗಳನ್ನು ಮಂಡಿಸಲಾಯಿತು" ಎಂದರು.
"ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 2023-24ನೇ ಸಾಲಿನ ಮೊದಲನೇ ಹಾಗೂ ಮಧ್ಯಂತರ ವರದಿ ಹಾಗೂ ಕರ್ನಾಟಕ ವಿಧಾನ ಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿಯ 2023-24ನೇ ಸಾಲಿನ 136ನೇ ವರದಿಗಳನ್ನು ಒಪ್ಪಿಸಲಾಯಿತು. 2023-2024ನೇ ಸಾಲಿನ ಆಯವ್ಯಯ ಅಂದಾಜುಗಳ ಮೊದಲನೆ ಕಂತು ಹಾಗೂ 2023-24ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ಮಂಡಿಸಲಾಯಿತು" ಎಂದು ತಿಳಿಸಿದರು.