ಸಾರಿಗೆ ಇಲಾಖೆಗೆ 9 ಸಾವಿರ ಸಿಬ್ಬಂದಿ ನೇಮಕ..5500 ಹೊಸ ಬಸ್ ಖರೀದಿ : ಸಚಿವ ರಾಮಲಿಂಗಾರೆಡ್ಡಿ ಬೆಳಗಾವಿ :ನಾನು ಸಾರಿಗೆ ಮಂತ್ರಿ ಆಗಿದ್ದಾಗ ನೇಮಕಾತಿ ಆಗಿದ್ದೇ ಕೊನೆ. ಕಳೆದ ಏಳು ವರ್ಷಗಳಲ್ಲಿ 13,888 ಸಿಬ್ಬಂದಿ ನಿವೃತ್ತಿ ಹೊಂದಿದ್ದಾರೆ. ಈಗ 9 ಸಾವಿರ ಜನರನ್ನು ಹೊಸದಾಗಿ ನೇಮಕ ಮಾಡಿಕೊಳ್ಳುತ್ತಿದ್ದು, ಇದಕ್ಕೆ ಅನುಮತಿ ಸಿಕ್ಕಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್ನಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಮತ್ತು ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಮನವಿ ಸ್ವೀಕರಿಸಿದ್ದೇನೆ. ಬಿಸಿ ಊಟ ತಯಾರಿಸುವವರಿಗೆ ಗೌರವಧನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಶಿಳ್ಳೇಕ್ಯಾತ ಸಮಾಜದ ಬೇಡಿಕೆ, ಮಹಿಳೆಯರಿಗೆ ಅನಧಿಕೃತ ಗರ್ಭಕೋಶ ಆಪರೇಷನ್, ಹೀಗೆ ಅನೇಕ ಸಮಸ್ಯೆಗಳಿವೆ. ಪ್ರತಿಭಟನಾಕಾರರು ಕೊಟ್ಟಿರುವ ಮನವಿಗಳನ್ನು ಸಿಎಂಗೆ ಕೊಡುತ್ತೇನೆ. ಸರ್ಕಾರ ಕೂಡ ಅವರಿಗೆ ಸ್ಪಂದಿಸುತ್ತದೆ ಎಂದು ಭರವಸೆ ನೀಡಿದರು.
ಉತ್ತರ ಕರ್ನಾಟಕದ ಬಗ್ಗೆ ತಾರತಮ್ಯ ವಿಚಾರಕ್ಕೆ ಪ್ರತಿಕ್ರಿಯಿಸಿ, ತಾರತಮ್ಯ ಅಷ್ಟೇನೂ ಇಲ್ಲ. ಕೆಲವೊಂದು ಲೋಪದೋಷಗಳು ಇರಬಹುದು. ಆದರೆ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಸಾಕಷ್ಟು ಅಭಿವೃದ್ಧಿ ಆಗಿವೆ. ಸಾಕಷ್ಟು ನೀರಾವರಿ ಯೋಜನೆ, ರಸ್ತೆಗಳ ಅಭಿವೃದ್ಧಿ ವಿಚಾರದಲ್ಲಿ ಒತ್ತು ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುವರ್ಣ ಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರ ಮಾಡಿದ್ರೆ ಜನರು ಬರ್ತಾರೆ, ಹೋಗ್ತಾರೆ. ರಾಜ್ಯಮಟ್ಟದ ಕಚೇರಿ ಸ್ಥಳಾಂತರ ಮಾಡಬೇಕು. ಮಹದಾಯಿ ಯೋಜನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಶಕ್ತಿ ಯೋಜನೆ ಜಾರಿ ಪರಿಣಾಮ ಶಾಲಾ ಮಕ್ಕಳಿಗೆ ಬಸ್ ಸಮಸ್ಯೆ ಆಗುತ್ತಿರುವ ಬಗ್ಗೆ ಮಾತನಾಡಿ, ಶಕ್ತಿ ಯೋಜನೆ ಕಾರ್ಯಕ್ರಮ ಆದ್ಮೇಲೆ ಜನರು ಸರ್ಕಾರಿ ಬಸ್ಗಳಲ್ಲಿ ಹೆಚ್ಚು ಓಡಾಡುತ್ತಿದ್ದಾರೆ. ಮೊದಲು 85 ಲಕ್ಷ ಜನರು ಓಡಾಡುತ್ತಿದ್ದರು. ಈಗ 1 ಕೋಟಿ ಜನರು ಓಡಾಟ ಮಾಡುತ್ತಿದ್ದಾರೆ. ಶಾಲೆಗೆ ಹೋಗುವಾಗ, ಬರುವಾಗ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಮಹಿಳೆಯರ ಓಡಾಟ ಕೂಡ ಹೆಚ್ಚಾಗಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಕಳೆದ ನಾಲ್ಕು ವರ್ಷದಲ್ಲಿ ಒಂದೇ ಒಂದು ಬಸ್ ಖರೀದಿ ಮಾಡಿಲ್ಲ. ಹೊಸ ಬಸ್ ತಗೊಂಡು ಹಳೆಯ ಬಸ್ ಸ್ಕ್ಯ್ರಾಪ್ ಮಾಡಬೇಕು. ಹೀಗೆ ಆಗಿದ್ರೆ ಏನು ಸಮಸ್ಯೆ ಆಗುತ್ತಿರಲಿಲ್ಲ ಎಂದು ತಿಳಿಸಿದರು.
5500 ಹೊಸ ಬಸ್ ಖರೀದಿ, 9 ಸಾವಿರ ಸಿಬ್ಬಂದಿ ನೇಮಕಾತಿ: ಬೆಳಗಾವಿ ಸಾರಿಗೆ ವಿಭಾಗಕ್ಕೆ ಹಳೆ ಬಿಎಂಟಿಸಿ ಬಸ್ ಬಿಟ್ಟಿರುವುದಕ್ಕೆ ಪ್ರತಿಕ್ರಿಯಿಸಿ, ಇಲ್ಲಿ ಬಸ್ ಇಲ್ಲ ಅಂತಾ ತೆಗೆದುಕೊಂಡಿದ್ದಾರೆ, ಮತ್ತೆ ವಾಪಸ್ ಕಳುಹಿಸಿದ್ದಾರೆ ಎಂದರು. ಬಸ್ನಿಂದ ಬಿದ್ದು ವಿದ್ಯಾರ್ಥಿನಿ ಸಾವು ಮತ್ತು ಅಪಘಾತಗಳು ಸಂಭವಿಸುತ್ತಿರುವುದಕ್ಕೆ, ಸತತವಾಗಿ ನಾಲ್ಕು ವರ್ಷ ಬಸ್ ಖರೀದಿ ಮಾಡಿಲ್ಲ. ಏಳು ವರ್ಷಗಳಿಂದ ನೇಮಕಾತಿ ಮಾಡಿಲ್ಲ, ಹೀಗಾಗಿ ಸಮಸ್ಯೆ ಆಗುತ್ತಿದೆ. ಹಾಗಾಗಿ, 5500 ಹೊಸ ಬಸ್ ಖರೀದಿ ಮಾಡುತ್ತಿದ್ದು, 9 ಸಾವಿರ ಸಿಬ್ಬಂದಿ ನೇಮಕಾತಿ ಮಾಡಲಿದ್ದೇವೆ ಎಂದು ಸಚಿವರು ತಿಳಿಸಿದರು.
2013ರಿಂದ 2017ರ ವರೆಗೆ ನಾನು ಸಾರಿಗೆ ಸಚಿವ ಆಗಿದ್ದಾಗ ಈ ಭಾಗಕ್ಕೆ ಹೆಚ್ಚು ಬಸ್ ನಿಲ್ದಾಣ ಕೊಟ್ಟಿದ್ದೆ. ಬೆಳಗಾವಿ, ಬಾಗಲಕೋಟೆ, ಗದಗ, ಹುಬ್ಬಳ್ಳಿ ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಅತಿ ಹೆಚ್ಚು ಬಸ್ ನಿಲ್ದಾಣ ನೀಡಿದ್ದೆ. ಇನ್ನು ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಎರಡು ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ಹಾಕಲು ಸೂಚನೆ ನೀಡಿದ್ದೇನೆ. ಬೆಳಗಾವಿ ನಗರಕ್ಕೆ 100 ಹೊಸ ಬಸ್ ಖರೀದಿ ಮಾಡುತ್ತೇನೆ. ಮೂರು ತಿಂಗಳಲ್ಲಿ ಅವಧಿಯಲ್ಲಿ ಈ ಹೊಸ ಬಸ್ ಗಳು ಬರುತ್ತವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಇದನ್ನೂ ಓದಿ :25 ಸಾವಿರ ಸ್ಮಾರಕಗಳ ರಕ್ಷಣೆಗೆ ಕ್ರಮ, ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ: ಹೆಚ್.ಕೆ.ಪಾಟೀಲ್