ಚಿಕ್ಕೋಡಿ (ಬೆಳಗಾವಿ) : ಚಿಕ್ಕೋಡಿ ತಾಲೂಕಿನ ಸದಲಗಾ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 50 ಲಕ್ಷ ರೂಪಾಯಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬೋರಗಾಂವ ಪಟ್ಟಣದಿಂದ ಸದಲಗಾ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಬಳಿ ಈ ಹಣ ಸಿಕ್ಕಿದೆ. ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ, ಹುಕ್ಕೇರಿ ತಾಲೂಕಿನ ಬೈರಾಪುರ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3 ಲಕ್ಷ 88 ಸಾವಿರ 500 ರೂಪಾಯಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಪಡಿತರ ಅಕ್ಕಿ ವಶಕ್ಕೆ:ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು 2.31 ಲಕ್ಷ ಮೌಲ್ಯದ 10 ಟನ್ ಪಡಿತರ ಅಕ್ಕಿಯನ್ನು ಸಂಕೇಶ್ವರ ಚೆಕ್‌ಪೋಸ್ಟ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚೆಕ್ಪೊಸ್ಟ್ನಲ್ಲಿ ಎಫ್ಎಸ್ಟಿ ಹಾಗೂ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ದಾಖಲೆ ಇಲ್ಲದೆ ಪಡಿತರ ಸಾಗಿಸುತ್ತಿದ್ದರು. ಸಂಕೇಶ್ವರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ಶಾಸಕನಿಗೆ ಘೇರಾವ್: ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಬಿಜೆಪಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಕಿತ್ತೂರು ಮತಕ್ಷೇತ್ರದ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ನಡೆಯಿತು. ಸೋಮವಾರ ರಾತ್ರಿ ಗ್ರಾಮದೇವತೆ ದರ್ಶನ ಪಡೆದುಕೊಂಡು ಹೊರಗೆ ಬರುತ್ತಿದ್ದಂತೆ ಶಾಸಕರಿಗೆ ಘೇರಾವ್ ಹಾಕಿದ ಗ್ರಾಮಸ್ಥರು, ಗ್ರಾಮವನ್ನು ನಿರ್ಲಕ್ಷ ಮಾಡಿದ್ದೀರಿ? ಹಲವು ವರ್ಷಗಳಿಂದ ನಮ್ಮೂರಿಗೆ ನೀವು ಬಂದಿಲ್ಲ. ಮಾಜಿ ಕೇಂದ್ರ ಸಚಿವ ಬಾಬಾಗೌಡರು ನಿಧನರಾದಾಗ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನೂ ಮಾಡಿಲ್ಲ. ಈಗ ಚುನಾವಣೆ ಬಂದಿದೆ ಎಂದು ಬಂದಿದ್ದೀರಿ ಎಂದು ಪ್ರಶ್ನೆಗಳ ಸುರಿಮಳೆಗೈದರು.
ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದ ಗ್ರಾಮದ ಯುವಕ ಶಂಕರಗೌಡ ಪಾಟೀಲ ಮಾಧ್ಯಮಗಳ ಜೊತೆಗೆ ಮಾತನಾಡಿ, ನಾನು ಕೂಡ ನಿಷ್ಠಾವಂತ ಬಿಜೆಪಿ ಕಾರ್ಯಕರ್ತ. ಆದರೆ ಶಾಸಕರು ವೈಯಕ್ತಿಕವಾಗಿ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಎಫ್ಐಆರ್ ಹಾಕಿಸಿ ಜೈಲಿಗೂ ಹಾಕಿದ್ದರು. ಇವರ ಕಳಪೆ ಕಾಮಗಾರಿಗಳ ಬಗ್ಗೆ ನನ್ನ ಬಳಿ ದಾಖಲೆಗಳಿದ್ದು, ಬಿಡುಗಡೆ ಮಾಡಲು ಸಿದ್ಧ ಎಂದಿದ್ದಾರೆ. ಗ್ರಾಮಸ್ಥರು ತಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಮತಯಾಚನೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಶಾಸಕ ತೆರಳಿದ್ದಾರೆ.
ಇದನ್ನೂ ಓದಿ :ಬೈಲಹೊಂಗಲ ಮತಕ್ಷೇತ್ರದಲ್ಲಿ ಕೈ ಸ್ಥಿರ, ಕಮಲ ತಳಮಳ; ಅವಕಾಶಕ್ಕಾಗಿ ಜೆಡಿಎಸ್ ಹೋರಾಟ