ಬೆಳಗಾವಿ/ ಬೆಂಗಳೂರು :ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತೆಲಂಗಾಣ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿ ಸದಸ್ಯರು ಧರಣಿ ನಡೆಸುತ್ತಿದ್ದ ನಡುವೆಯೇ 5 ವಿಧೇಯಕಗಳನ್ನು ಚರ್ಚೆ ಇಲ್ಲದೇ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಇಂದು ಬೆಳಗ್ಗೆ ಪ್ರಶೋತ್ತರ ಅವಧಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಉತ್ತರವನ್ನು ತಿರಸ್ಕರಿಸುವುದಾಗಿ ಹೇಳಿದ ಬಿಜೆಪಿ ಸದಸ್ಯರು, ವಿವಾದಿತ ಹೇಳಿಕೆ ನೀಡಿದ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪಟ್ಟುಹಿಡಿದರು.
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ: ಸರ್ಕಾರ ಬಿಜೆಪಿ ಸದಸ್ಯರ ಬೇಡಿಕೆಗೆ ಸ್ಪಂದಿಸದಿದ್ದಾಗ ಸದನದ ಬಾವಿಗಿಳಿದು ಸದಸ್ಯರು ಧರಣಿ ಆರಂಭಿಸಿದರು. ಇದರ ನಡುವೆಯೇ ಪ್ರಶೋತ್ತರ ಕಲಾಪ ನಡೆಯಿತು. ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು. ಆನ್‌ಲೈನ್ ಗೇಮ್ಗಳನ್ನು ಜಿಎಸ್‌ಟಿ ತೆರಿಗೆ ವ್ಯಾಪ್ತಿಗೊಳಪಡಿಸಲು ವಿಧೇಯಕ ರೂಪಿಸಲಾಗಿದೆ. ಅಷ್ಟು ಮಾತ್ರಕ್ಕೆ ಆನ್‌ಲೈನ್ ಗೇಮ್ಗಳನ್ನು ಕಾನೂನುಬದ್ದಗೊಳಿಸಲಾಗಿದೆ ಎಂದರ್ಥವಲ್ಲ. ಈ ಹಿಂದೆ ಕೇಂದ್ರ ಸರ್ಕಾರದ ಕಾಯ್ದೆಗನುಗುಣವಾಗಿ ರಾಜ್ಯಸರ್ಕಾರ ತಿದ್ದುಪಡಿಯನ್ನು ರೂಪಿಸಿದೆ ಎಂದು ಸಚಿವರು ಹೇಳಿದರು.
ವೈದ್ಯಕೀಯ ಅಭ್ಯರ್ಥಿಗಳ ಕಡ್ಡಾಯ ಸೇವಾ ವಿಧೇಯಕ :ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪರವಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, 2023ನೇ ಸಾಲಿನಲ್ಲಿ ಕರ್ನಾಟಕ ವೈದ್ಯಕೀಯ ಕೋರ್ಸ್ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿದರು. ಈ ವಿಧೇಯಕದಿಂದ ಸರ್ಕಾರಿ ಆಸತ್ರೆಗಳಲ್ಲಿ ವೈದ್ಯರ ಕೊರತೆ ನೀಗಲಿದೆ ಎಂದು ಹೇಳಿದರು.
ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕ :ನಂತರ ಕಂದಾಯ ಇಲಾಖೆಗೆ ಸೇರಿದ ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿದರು. ಈ ವಿಧೇಯಕ ನೋಂದಣಿ ಸ್ಟಾಂಪ್ ಶುಲ್ಕವನ್ನು ಹೆಚ್ಚಿಸುವುದಲ್ಲ. ಬದಲಾಗಿ ವಿವಿಧ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಖರೀದಿಸುವ ಸ್ಟಾಂಪ್‌ಗಳ ದರವನ್ನು ಹೆಚ್ಚಿಸಲಾಗಿದೆ. 5, 10, 20 ರೂ.ಗಳಿದ್ದ ದರವನ್ನು ಕಾಲಕ್ಕನುಗುಣವಾಗಿ ಹೆಚ್ಚಿಸಲಾಗಿದೆ. ಈ ಮೊದಲು 1994 ಮತ್ತು 2002ರಲ್ಲಿ ಮಾತ್ರ ಕೆಲ ಸ್ಟಾಂಪ್ ಗಳ ಮೇಲೆ ದರ ಪರಿಷ್ಕರಣೆಯಾಗಿತ್ತು ಎಂದು ಸದನಕ್ಕೆ ವಿವರಿಸಿದರು.