ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಅತಿವೃಷ್ಟಿಯಿಂದ 400 ಕೋಟಿ ರೂ. ಹಾನಿ: ಸಚಿವ ಗೋವಿಂದ ಕಾರಜೋಳ - ಬೆಳೆ ಹಾನಿ ಸಮೀಕ್ಷೆ

ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ಅತಿವೃಷ್ಟಿಯಿಂದ ಒಟ್ಟಾರೆ 400 ಕೋಟಿ ರೂ. ಹಾನಿಯಾಗಿದೆ. ಸದ್ಯಕ್ಕೆ ಎನ್​​ಡಿಆರ್​​ಎಫ್ ಮಾರ್ಗಸೂಚಿ ಪ್ರಕಾರ 105 ಕೋಟಿ ರೂ. ಹಾನಿಯ ಕುರಿತು ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದರು.

Minister Govind Karjol
ಸಚಿವ ಗೋವಿಂದ ಕಾರಜೋಳ

By

Published : Sep 17, 2022, 12:48 PM IST

ಬೆಳಗಾವಿ:ಬೆಳೆ ಹಾನಿ ಸಮೀಕ್ಷೆ ನಡೆಸುವಾಗ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕು. ಕೆಲವು ಕಡೆಗಳಲ್ಲಿ ಜಂಟಿ ಸಮೀಕ್ಷೆ ಬಳಿಕವೂ ಬೆಳೆಹಾನಿ ಬಗ್ಗೆ ವರದಿಯಾಗಿರುವುದರಿಂದ ಇವುಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು.

ಅಧಿಕಾರಿಗಳಿಗೆ ಸೂಚನೆ:ನಗರದ ಪ್ರವಾಸಿ ಮಂದಿರದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಕುರಿತು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಬಳಿಕ ಮಾತನಾಡಿದ ಅವರು, ಅತಿವೃಷ್ಟಿಯಿಂದ ಜಮೀನುಗಳಲ್ಲಿ ನೀರು ಹೆಚ್ಚು ದಿನಗಳ ಕಾಲ‌ ನಿಂತ ಪರಿಣಾಮ ತೋಟಗಾರಿಕೆ ಹಾಗೂ ತರಕಾರಿ ಬೆಳೆಗಳು ಸಂಪೂರ್ಣ ನಾಶಗೊಂಡಿರುತ್ತದೆ. ಆದ್ದರಿಂದ ಸಮೀಕ್ಷೆ ನಡೆಸುವಾಗ ಈ ಅಂಶಗಳನ್ನು ಪರಿಗಣಿಸಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವ ಗೋವಿಂದ ಕಾರಜೋಳ

400 ಕೋಟಿ ರೂ.ಹಾನಿ: ಜಿಲ್ಲೆಯಲ್ಲಿ ಇತ್ತೀಚಿನ ಅತಿವೃಷ್ಟಿಯಿಂದ ಒಟ್ಟಾರೆ 400 ಕೋಟಿ ರೂ. ಹಾನಿಯಾಗಿದೆ. ಸದ್ಯಕ್ಕೆ ಎನ್​​ಡಿಆರ್​​ಎಫ್ ಮಾರ್ಗಸೂಚಿ ಪ್ರಕಾರ 105 ಕೋಟಿ ರೂ. ಹಾನಿಯ ಕುರಿತು ವರದಿ ಸಲ್ಲಿಸಲಾಗಿದೆ ಎಂದರು. ಇನ್ನು ಈ ಬಾರಿ ಮನೆ ಹಾನಿ ಸಮೀಕ್ಷೆಯನ್ನು ಅತ್ಯಂತ ತ್ವರಿತವಾಗಿ ಹಾಗೂ ಪಾರದರ್ಶಕವಾಗಿ ಕೈಗೊಂಡು ಪರಿಹಾರ ಕೂಡ ಜಮೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಬೋಗಸ್ ಪ್ರಕರಣ..ಎಚ್ಚರಿಕೆ ವಹಿಸಲು ಸೂಚನೆ:ಬೆಳೆಹಾನಿ ಹಾಗೂ ಮನೆ ಹಾನಿ ಸಮೀಕ್ಷೆ ಮಾಡುವಾಗ ಯಾವುದೇ ಕಾರಣಕ್ಕೂ ಬೋಗಸ್ ಪ್ರಕರಣ ಸೇರ್ಪಡೆಯಾಗದಂತೆ ಎಚ್ಚರಿಕೆ ವಹಿಸಬೇಕು. ಸಮೀಕ್ಷೆ ನಡೆಸುವಾಗ ಸಾಧ್ಯವಾದಷ್ಟು ರೈತರು ಮತ್ತು ಕುಟುಂಬದ ಜನರ ಸಮ್ಮುಖದಲ್ಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಗಡಿಭಾಗದ ಜನರು ಆರೋಗ್ಯ ಸೌಲಭ್ಯಕ್ಕಾಗಿ ನೆರೆಯ ರಾಜ್ಯಗಳಿಗೆ ತೆರಳುತ್ತಿದ್ದಾರೆ. ಆದ್ದರಿಂದ ಅಂತಹ ಜನರಿಗೆ ನಮ್ಮ ಜಿಲ್ಲೆಯಲ್ಲಿ ಅತ್ಯುತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗುವಂತೆ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ವಿಮಾನ ನಿಲ್ದಾಣ ರಸ್ತೆ- ಪ್ರಸ್ತಾವನೆ:ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ರಸ್ತೆಯನ್ನು ಚತುಷ್ಪಥವನ್ನಾಗಿ ಪರಿವರ್ತಿಸಲು ಡಿಪಿಆರ್ ಸಿದ್ಧವಾಗಿರುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಒಪ್ಪಿಗೆ ಪಡೆಯಲಾಗುವುದು. ಚಿಕ್ಕೋಡಿಯಲ್ಲಿ 250 ಹಾಸಿಗೆಗಳ ಆಸ್ಪತ್ರೆ ಪ್ರಸ್ತಾವ ಸಲ್ಲಿಕೆಗೆ ಸೂಚಿಸಲಾಗಿದೆ. ಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ ಇನ್ನೂ 30 ಕೋಟಿ ರೂ.ಅನುದಾನ ನೀಡಲಾಗಿದೆ. ಬಳ್ಳಾರಿ ‌ನಾಲಾ ಸಮಸ್ಯೆ ಪರಿಹಾರಕ್ಕಾಗಿ ಶಾಶ್ವತ ಯೋಜನೆ ರೂಪಿಸುವ ಕೆಲಸ ನಡೆದಿದೆ‌ ಎಂದು ಅವರು ತಿಳಿಸಿದರು.

ಅತಿವೃಷ್ಟಿಯಿಂದ 105 ಕೋಟಿ ಹಾನಿ-ವರದಿ ಸಲ್ಲಿಕೆ:ಜಿಲ್ಲೆಯಲ್ಲಿ ಇತ್ತೀಚಿನ ಅತಿವೃಷ್ಟಿಯಿಂದ ಮನೆ ಹಾನಿ, ಬೆಳೆ ಹಾನಿ ಹಾಗೂ ಮೂಲ ಸೌಕರ್ಯಗಳ ಹಾನಿ ಸೇರಿದಂತೆ ಒತ್ಟಾರೆ ಅಂದಾಜು 400 ಕೋಟಿ ರೂ. ಹಾನಿಯಾಗಿರುತ್ತದೆ. ಆದರೆ ಎನ್​​ಡಿಆರ್​​ಎಫ್ ಮಾರ್ಗಸೂಚಿಯಂತೆ 105 ಕೋಟಿ ರೂ. ಹಾನಿ ಕುರಿತು ವರದಿ ಸಲ್ಲಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಐವರು ಬಲಿ:ಜಿಲ್ಲೆಯಲ್ಲಿ ಗೋಡೆ ಕುಸಿದು, ಸಿಡಿಲು ಬಡಿದು ಹಾಗೂ ಮರ ಬಿದ್ದು ಹೀಗೆ ಐವರು ಜನರು ಪ್ರಾಣ ಕಳೆದುಕೊಂಡಿರುತ್ತಾರೆ. ಈಗಾಗಲೇ ತಲಾ ಐದು ಲಕ್ಷ ಪರಿಹಾರ ನೀಡಲಾಗಿರುತ್ತದೆ. ಜುಲೈ-ಆಗಸ್ಟ್ ಬೆಳೆ ಹಾನಿಯಾಗಿರುವುದನ್ನು ಜಂಟಿ ಸಮೀಕ್ಷೆ ಕೈಗೊಂಡು ಕೂಡಲೇ 17.01 ಕೋಟಿ ರೂಪಾಯಿ ಪರಿಹಾರವನ್ನು ಜಮೆ‌ ಮಾಡಲಾಗಿರುತ್ತದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಉಂಟಾಗಿರುವ ಹಾನಿಯ ಸಮೀಕ್ಷೆ ಕೈಗೊಂಡು ಕೂಡಲೇ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಪಾರದರ್ಶಕ ಸಮೀಕ್ಷೆ:ಅತಿವೃಷ್ಟಿಯಿಂದ 678 ಮನೆಗಳಿಗೆ ನೀರು ನುಗ್ಗಿದ್ದರಿಂದ ಸರ್ಕಾರದ ಮಾರ್ಗಸೂಚಿ ಪ್ರಕಾರ ಪ್ರತಿ ಕುಟುಂಬಕ್ಕೆ ತಲಾ 10 ಸಾವಿರ ರೂ.ಪರಿಹಾರ ಕೂಡ ನೀಡಲಾಗಿದೆ. ಜಿಲ್ಲೆಯಲ್ಲಿ ಜೂನ್ ತಿಂಗಳಿನಲ್ಲಿ ಶೇ.21ಕ್ಕಿಂತ ಕಡಿಮೆ ಮಳೆಯಾಗಿತ್ತು. ಜುಲೈನಲ್ಲಿ ಶೇ. 41 ಅಧಿಕ ಹಾಗೂ ಆಗಸ್ಟ್​​ನಲ್ಲಿ ಶೇ. 39‌ ಅಧಿಕ ಮಳೆಯಾದರೆ, ಸೆಪ್ಟೆಂಬರ್​ನಲ್ಲಿ ವಾಡಿಕೆಗಿಂತ ಅಧಿಕ ಮಳೆಯಿಂದ ಹಾನಿ ಉಂಟಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಅತ್ಯಂತ ಪಾರದರ್ಶಕವಾಗಿ ಮನೆ ಹಾನಿ ಸಮೀಕ್ಷೆ ಕೈಗೊಳ್ಳಲಾಗಿದೆ. ಯಾವುದೇ ದೂರುಗಳಿಲ್ಲ ಎಂದು ತಿಳಿಸಿದರು.

ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದರ್ಶನ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗಣ್ಣವರ, ಶಶಿಧರ್ ಬಗಲಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಪರಿಹಾರದ ವಿಚಾರವಾಗಿ ತಾರತಮ್ಯ: ಹಾಲಿ ಮಾಜಿ ಶಾಸಕರ ಜಟಾಪಟಿ!

ABOUT THE AUTHOR

...view details