ಬೆಳಗಾವಿ: ಮಗ ಮಾಡಿದ್ದ 700 ರೂಪಾಯಿ ಸಾಲದ ವಿಚಾರಕ್ಕೆ ನಡೆದ ಜಗಳದಲ್ಲಿ ತಂದೆಯನ್ನು ಕೊಂದಿದ್ದ ನಾಲ್ವರು ಅಪರಾಧಿಗಳಿಗೆ ಗೋಕಾಕಿನ 12ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಗೋಕಾಕ ತಾಲೂಕಿನ ಮರಡಿಮಠ ಗ್ರಾಮದಲ್ಲಿ ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಕೊಲೆ ಪ್ರಕರಣ ನಡೆದಿತ್ತು. ಸಾಲದ ವಿಚಾರಕ್ಕೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು.
ಮಾನಿಂಗ್ ಗಾಯಕವಾಡ (41) ಕೊಲೆಯಾಗಿದ್ದ ವ್ಯಕ್ತಿ. ಇವರ ಮಗ ಹನುಮಂತ ಗಾಯಕವಾಡ ಪಕ್ಕದ ಮನೆಯ ರಾಜು ಶಂಕರ್ ಭಜಂತ್ರಿ ಬಳಿ 700 ರೂ ಸಾಲ ಪಡೆದುಕೊಂಡಿದ್ದ. ಬಳಿಕ ಮರಳಿಸುವ ವಿಚಾರದಲ್ಲಿ ಎರಡೂ ಕುಟುಂಬಗಳ ನಡುವೆ ಜಗಳ ಏರ್ಪಟ್ಟಿತ್ತು. ಈ ಜಗಳ ವಿಕೋಪಕ್ಕೆ ತಿರುಗಿ ಗಲಾಟೆಯಲ್ಲಿ ಮಾನಿಂಗ ಕೊಲೆಯಾಗಿದ್ದರು.