ಕರ್ನಾಟಕ

karnataka

ETV Bharat / state

3574.67 ಕೋಟಿ ರೂ.ಗಳ ಪೂರಕ ಅಂದಾಜುಗಳ ಎರಡನೇ ಕಂತಿಗೆ ವಿಧಾನ ಪರಿಷತ್ ಅಂಗೀಕಾರ - ವಿಧಾನ ಪರಿಷತ್​​ನಲ್ಲಿ ಪೂರಕ ಅಂದಾಜು ಧನ ವಿನಿಯೋಗ ವಿಧೇಯಕ ಅಂಗೀಕಾರ

2021-20 ನೇ ಸಾಲಿನ 3574.67 ಕೋಟಿ ರೂ.ಗಳಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳ ಪ್ರಸ್ತಾವನೆಗೆ ಧ್ವನಿಮತದ ಮೂಲಕ ವಿಧಾನಪರಿಷತ್ ಅಂಗೀಕಾರ ನೀಡಿತು.

Finance Bill Passed in Karnataka Legislative Session
ಪೂರಕ ಅಂದಾಜುಗಳ ಎರಡನೇ ಕಂತಿಗೆ ವಿಧಾನ ಪರಿಷತ್ ಅಂಗೀಕಾರ

By

Published : Dec 24, 2021, 5:36 PM IST

Updated : Dec 24, 2021, 7:00 PM IST

ಬೆಳಗಾವಿ:ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ 2021-20 ನೇ ಸಾಲಿನ 3574.67 ಕೋಟಿ ರೂ.ಗಳ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳ ಪ್ರಸ್ತಾವನೆಗೆ ಧ್ವನಿಮತದ ಮೂಲಕ ವಿಧಾನಪರಿಷತ್ ಅಂಗೀಕಾರ ನೀಡಿತು.

ವಿಧಾನ ಪರಿಷತ್​​​​​ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧನವಿನಿಯೋಗ ವಿಧೇಯಕ ಮಂಡಿಸಿದರು. ರಾಜ್ಯದ ಸಂಚಿತ ನಿಧಿಯಿಂದ ಅಧಿಕ ಮೊತ್ತ ಪಡೆಯಲು ಇರುವ ಅವಕಾಶದಂತೆ 3574.67 ಕೋಟಿ ರೂ.ಗಳ ಅನುಸೂಚನೆ ಎರಡನೇ ಕಂತು ಪಡೆಯಲು ಪೂರಕ ಅಂದಾಜು ಸಲ್ಲಿಸಲಾಗಿದೆ.

ವಿಧಾನ ಪರಿಷತ್​​​​​ನಲ್ಲಿ ಧನವಿನಿಯೋಗ ವಿಧೇಯಕ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪೂರಕ ಅಂದಾಜು ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟಿದೆ. ಅದರಂತೆ ನಾವು ವಾರ್ಷಿಕ ಮೂರು ಪೂರಕ ಅಂದಾಜು ಮಾಡಿಕೊಂಡು ಬಂದಿದ್ದೇವೆ. ಬಜೆಟಿನ ಶೇ. 8 ರಷ್ಟು ಮೀರದಂತೆ ಪೂರಕ ಅಂದಾಜು ಮಾಡಲು ಅವಕಾಶವಿದ್ದು, ಅದರ ಒಳಗಡೆಯೇ ಪೂರಕ ಅಂದಾಜು ಮಂಡಿಸಲಾಗಿದೆ.

3574.67 ಕೋಟಿ ರೂ.ಗಳಲ್ಲಿ 2,827 ಕೋಟಿ ಹಣವನ್ನು ರಾಜ್ಯ ಸರ್ಕಾರ ಖರ್ಚು ಮಾಡಬೇಕಿದ್ದು, ಉಳಿದದ್ದು ಕೇಂದ್ರದಿಂದ ಮರುಪಾವತಿ ರೂಪದಲ್ಲಿ ನಮಗೆ ಬರಲಿದೆ ಎಂದು ವಿವರಣೆ ನೀಡಿ ಎರಡನೇ ಕಂತಿನ ಪೂರಕ ಅಂದಾಜಿಗೆ ಒಪ್ಪಿಗೆ ನೀಡುವಂತೆ ಸದನಕ್ಕೆ ಮನವಿ ಮಾಡಿದರು.

ಆಗ ಧನವಿನಿಯೋಗದ ಮೇಲೆ ವಿಧಾನ ಪರಿಷತ್​​​​ನಲ್ಲಿ ವಿಸ್ತೃತವಾದ ಚರ್ಚೆ ನಡೆಯಿತು. ಆಡಳಿತ ಮತ್ತು ಪ್ರತಿಪಕ್ಷದ 17 ಸದಸ್ಯರು ಪೂರಕ ಅಂದಾಜು ಕುರಿತು ಮಾತನಾಡಿ ಸರ್ಕಾರಕ್ಕೆ ಕೆಲವೊಂದು ಸಲಹೆ ನೀಡಿದರು. ಪರಿಷತ್ ಸದಸ್ಯರ ಅನುದಾನ ಸರಿಯಾಗಿ ಬಿಡುಗಡೆ ಮಾಡಬೇಕು ಎನ್ನುವುದು ಸೇರಿಕೊಂಡು ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ವ್ಯವಸ್ಥೆ ಕುರಿತು ಸದಸ್ಯರು ಬೆಳಕು ಚಲ್ಲಿದರು.

ಸುದೀರ್ಘ ಚರ್ಚೆ ನಂತರ ಸದನಕ್ಕೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಬಾರಿಯ ನೆರೆ ಹಾನಿ ವೇಳೆ ಸಾಕಷ್ಟು ಶಾಲೆಗಳಿಗೆ ಹಾನಿಯಾಗಿದೆ. ಹಾಗಾಗಿ ಮುಂದಿನ ಬಜೆಟ್​​​ನಲ್ಲಿ ಶಾಲಾ ಕೊಠಡಿಗಳ ದುರಸ್ತಿಗೆ ಹೆಚ್ಚಿನ ಅನುದಾನ ನೀಡುವ ಆದ್ಯತೆ ಕೊಡಲಾಗುತ್ತದೆ ಎಂದರು.

ವಿಧಾನ ಪರಿಷತ್​​​​​ನಲ್ಲಿ ಧನವಿನಿಯೋಗ ವಿಧೇಯಕ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಇಂದಿನ ಕಲಾಪದೊಂದಿಗೆ 25 ಸದಸ್ಯರು ನಿವೃತ್ತರಾಗುತ್ತಿದ್ದು, ಪುನರಾಯ್ಕೆ ಆಗದವರು ಕೂಡ ಶಾಸಕರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿದಿಯಡಿ ಅಭಿವೃದ್ಧಿ ಯೋಜನೆಗಳಿಗೆ ನೀಡಿರುವ ಕ್ರಿಯಾ ಯೋಜನೆಗೆ ಅನುಮತಿ ನೀಡಿವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಸಿಎಂ ಭರವಸೆ ನೀಡಿದರು.

ಕೋವಿಡ್ ಕಾರಣದಿಂದ ಪರಿಷತ್‌ ಸದಸ್ಯರ ಕ್ಷೇತ್ರಾಭಿವೃದ್ಧಿ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗಿದೆ. ಇದರಿಂದ ಅನುದಾನ ಸಿಗದೆ ಪರಿಷತ್ ಸದಸ್ಯರು ಅಭಿವೃದ್ಧಿ ಕೆಲಸ ಮಾಡಲು ತೊಂದರೆಯಾಗಿದೆ. ಅನುದಾನ ಬಿಡುಗಡೆ ವಿಳಂಬದಿಂದ ಮಂಜೂರಾತಿಗೆ ಕಾಯುತ್ತಿರುವ ಕೆಲಸ ಕಾರ್ಯಗಳಿಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. 2022ರ ಜನವರಿ 5 ರಂದು ನಿವೃತ್ತಿಯಾಗಲಿರುವ 25 ಸದಸ್ಯರು ಈಗಾಗಲೇ ನೀಡಿರುವ ಕ್ರಿಯಾ ಯೋಜನೆ ಪರಿಗಣಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಅಭಯ ನೀಡಿದರು.

ವಿಧಾನ ಪರಿಷತ್​​​​​ನಲ್ಲಿ ಧನವಿನಿಯೋಗ ವಿಧೇಯಕ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಶೀಘ್ರದಲ್ಲೆ ಮೇಕೆದಾಟು ಕಾಮಗಾರಿ​​ ಆರಂಭ:

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಹಣಕಾಸು ತೊಂದರೆ ಇಲ್ಲ. ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುತ್ತದೆ. ಎತ್ತಿನಹೊಳೆ ಯೋಜನೆಗೆ ಭೂಸ್ವಾಧೀನ ಸಮಸ್ಯೆ ಇದ್ದು, ಅದನ್ನು ಕೂಡ ತ್ವರಿತವಾಗಿ ಇತ್ಯರ್ಥಪಡಿಸಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ಮೇಕೆದಾಟು ಯೋಜನೆಗೆ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಪಡೆಯಲು ಡಿಪಿಆರ್ ಸಲ್ಲಿಸಿದ್ದು, ಒಪ್ಪಿಗೆ ಸಿಗುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್​​​​​ನಲ್ಲಿ ಧನವಿನಿಯೋಗ ವಿಧೇಯಕ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಶಿಕ್ಷಕರ ಭರ್ತಿಗೆ ಆಗ್ರಹ:

ಇದೇ ವೇಳೆ ಸದಸ್ಯರು ಶೀಘ್ರವೇ ಶಿಕ್ಷಕರ ನೇಮಕಾತಿ ಮಾಡುವಂತೆ ಆಗ್ರಹಿಸಿದರು. ಈ ವೇಳೆ ಸಿಎಂ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ 14 ಸಾವಿರ ಶಿಕ್ಷಕರ ನೇಮಕಾತಿ ಮಾಡುವ ಕುರಿತು ಆರ್ಥಿಕ ಇಲಾಖೆಗೆ ಅನುಮತಿ ಕೊಡಿಸಲಾಗಿದೆ. 5 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಇತರ ಭಾಗದಲ್ಲಿ 10 ಸಾವಿರ ಸೇರಿ ಒಟ್ಟು 15 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದರು.

ಕೋವಿಡ್​​ನಿಂದ ರಾಜ್ಯದ ಆರ್ಥಿಕತೆ ಚೇತರಿಕೆ :

ಕೊರೊನಾ ನಮ್ಮ ಆರ್ಥಿಕ ಸ್ಥಿತಿಗತಿಯ ಮೇಲೆ ದೊಡ್ಡ ಪರಿಣಾಮ ಬೀರಿದೆ.ಬೇರೆ ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ನಾವು ಬೇಗ ಸುಧಾರಿಸಿಕೊಳ್ಳುತ್ತಿದ್ದೇವೆ. ನಮ್ಮ ಜಿಡಿಪಿ ಕೂಡ ಸುಧಾರಿಸುತ್ತಿದೆ. ಮುಂಬರುವ ದಿನಗಳಲ್ಲಿ ಆರ್ಥಿಕ ಸ್ಥಿತಿ ಮತ್ತಷ್ಟು ಸುಧಾರಣೆಯಾಗಲಿದೆ. ಆದರೆ ಕಳೆದೆರಡು ವರ್ಷ ಕೋವಿಡ್​​​​​ನಿಂದ ಆದ ಆರ್ಥಿಕ ಹಿಂಜರಿತವನ್ನು ಸರಿಪಡಿಸಲು ಸ್ವಲ್ಪ ಸಮಯ ಅಗತ್ಯವಿದೆ ಎಂದು ಆರ್ಥಿಕ ಸವಾಲು ಕುರಿತು ಸಿಎಂ ಬೆಳಕು ಚಲ್ಲಿದರು.

ತೆರಿಗೆ ಸಂಗ್ರಹ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಪರಿಶೀಲನೆ ನಡೆಸಿದ್ದ ವೇಳೆ ಇಂತಹ ಉತ್ಪನ್ನದಲ್ಲೇ ತೆರಿಗೆ ಸಂಗ್ರಹ ಕಡಿಮೆ ಆಗಿದೆ. ಇಂತಹ ಕಡೆಯೇ ತೆರಿಗೆ ಉಲ್ಲಂಘನೆ ಆಗಿದೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದು, ಅದನ್ನು ತೆರಿಗೆ ಇಲಾಖೆಗಳ ಅಧಿಕಾರಿಗಳು ಸರಿಪಡಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಬೊಕ್ಕಸ ಬಲಪಡಿಸಲು ಮತ್ತು ರಾಜ್ಯದ ಅಭಿವೃದ್ಧಿಗೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದು, ಪೂರಕ ಅಂದಾಜುಗಳ ಧನವಿನಿಯೋಗ ವಿಧೇಯಕಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದರು.

ನಂತರ‌ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ 2021-20 ನೇ ಸಾಲಿನ 3574.67 ಕೋಟಿ ರೂ.ಗಳಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳ ಪ್ರಸ್ತಾವನೆಯನ್ನು ವಿಧಾನ ಪರಿಷತ್​​ನಲ್ಲಿ ಮತಕ್ಕೆ ಹಾಕಲಾಯಿತು. ಧ್ವನಿಮತದ ಮೂಲಕ ವಿಧಾನಪರಿಷತ್ ಅಂಗೀಕಾರ ನೀಡಿತು.

ಇದನ್ನೂ ಓದಿ: ವಿದಾಯ ಭಾಷಣದಲ್ಲಿ ಎಡವಟ್ಟು: ಪರಿಷತ್ ಘನತೆ ಬಗ್ಗೆ ಮಾತನಾಡಿ ಕ್ಷಮೆ ಕೇಳಿದ ರಘು ಆಚಾರ್..!

Last Updated : Dec 24, 2021, 7:00 PM IST

ABOUT THE AUTHOR

...view details