ಬೆಳಗಾವಿ:ಮಹಾಮಾರಿ ಕೊರೊನಾ ಇದೀಗ ಗಡಿ ಜಿಲ್ಲೆ ಬೆಳಗಾವಿಗೂ ಬಂದು ವಕ್ಕರಿಸಿಕೊಂಡಿದೆ. ಜಿಲ್ಲೆಯ ಮೂವರಿಗೆ ಈ ರೋಗದ ಸೋಂಕು ತಗುಲಿರುವುದು ದೃಢವಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಧಾರವಾಡದಲ್ಲಿ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ನಿಜಾಮುದ್ದಿನ್ ಮರ್ಕತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಬೆಳಗಾವಿಯ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ದೆಹಲಿಯಿಂದ ಬಂದ ಬೆಳಗಾವಿಯ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬೆಳಗಾವಿ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಬೆಳಗಾವಿಯ ಕ್ಯಾಂಪ್ ಪ್ರದೇಶದ ಕಸಾಯಿ ಗಲ್ಲಿ, ಬೆಳಗುಂದಿ, ಹಿರೇಬಾಗೇವಾಡಿ ಗ್ರಾಮದ ತಲಾ ಓರ್ವನಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಕಲೆ ಹಾಕುತ್ತಿದೆ. ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ದೆಹಲಿಯಿಂದ ಬೆಳಗಾವಿಗೆ ಆಗಮಿಸಿದ್ದ 62 ಜನರನ್ನು ಪತ್ತೆ ಹಚ್ಚಲಾಗಿತ್ತು. 35 ಜನರ ಥ್ರೋಟ್ ಸ್ವ್ಯಾಬ್, ರಕ್ತದ ಮಾದರಿಗಳನ್ನು ಬೆಂಗಳೂರು ಹಾಗೂ ಶಿವಮೊಗ್ಗಕ್ಕೆ ಕಳಿಸಲಾಗಿತ್ತು. ಬೆಂಗಳೂರಿಗೆ ಕಳುಹಿಸಿದ ಆರು ಮಾದರಿಗಳ ಪೈಕಿ ಮೂವರ ವರದಿ ಪಾಸಿಟಿವ್ ಬಂದಿದೆ. ದೆಹಲಿಯಿಂದ ಈ ಎಲ್ಲರೂ ಸಂಪರ್ಕ್ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನಿಂದ ಆಗಮಿಸಿದ್ದರು. ಸೋಂಕಿತರು ವಾಸವಿದ್ದ ಸ್ಥಳವನ್ನು ಜಿಲ್ಲಾಡಳಿತ ಬಫರ್ ಜೋನ್ ಎಂದು ಘೋಷಣೆ ಮಾಡಿದೆ.
ಬೆಳಗಾವಿ ನಗರ ಸೇರಿ ಬೆಳಗಾವಿ ತಾಲೂಕಿನಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಸೋಂಕಿತರು ಓಡಾಡಿದ ಪ್ರದೇಶದಲ್ಲಿ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಮನೆಯಿಂದ ಯಾರೂ ಹೊರ ಬರದಂತೆ ಗ್ರಾಮ ಪಂಚಾಯತಿಯಿಂದ ಅನೌನ್ಸ್ ಮೆಂಟ್ ಮಾಡಲಾಗುತ್ತಿದೆ.