ಬೆಳಗಾವಿ:ಮಹಾಮಾರಿ ಕೊರೊನಾ ನಿಯಂತ್ರಿಸಲು ಲಾಕ್‍ಡೌನ್ ಹೇರಿದ ಪರಿಣಾಮ ವ್ಯಾಪಾರ ವರ್ಗ ತತ್ತರಿಸಿದೆ. ಸಾವಿರಾರು ವಾಣಿಜ್ಯ ಮಳಿಗೆಗಳು ಲಾಕ್‍ಔಟ್ ಆಗಿದ್ದು, 10 ಸಾವಿರಕ್ಕೂ ಅಧಿಕ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅಲ್ಲದೆ, ಈ ವರ್ಷ ಬೆಳಗಾವಿಯಲ್ಲಿ 2 ಸಾವಿರ ವ್ಯಾಪಾರಿಗಳು 'ವ್ಯಾಪಾರ ಪರವಾನಿಗೆ' ಪತ್ರ ನವೀಕರಿಸಿಕೊಂಡಿಲ್ಲ!
ಬೆಳಗಾವಿ: ಕೊರೊನಾ ಹೊಡೆತಕ್ಕೆ 2 ಸಾವಿರ ಮಳಿಗೆಗಳು ಲಾಕ್‍ಔಟ್! - Belagavi mahanagara palike
ಹೋಟೆಲ್, ಜವಳಿ, ಆಟೋಮೊಬೈಲ್, ಕಿರಾಣಿ, ಜನರಲ್ ಸ್ಟೋರ್ಸ್, ವಿದ್ಯುತ್ ಉಪಕರಣ, ಸೀಮೆಂಟ್ ಅಂಗಡಿ, ಮೊಬೈಲ್, ಮೊಬೈಲ್ ಬಿಡಿಭಾಗಗಳ ಶಾಪ್, ಪುಸ್ತಕ-ನೋಟ್‍ಬುಕ್ ಮಾರಾಟ ಮಳಿಗೆ, ಮದುವೆ ಆಮಂತ್ರಣ ಪತ್ರಿಕೆ ಅಂಗಡಿ ಸೇರಿದಂತೆ ಬೆಳಗಾವಿಯಲ್ಲಿ ಸಾವಿರಾರು ಅಂಗಡಿಗಳು ಕೊರೊನಾ ಹೊಡೆತಕ್ಕೆ ಬೀಗ ಹಾಕಿವೆ.
ಬೆಳಗಾವಿ ಮಹಾನಗರ ಪಾಲಿಕೆ ಈಟಿವಿ ಭಾರತಕ್ಕೆ ನೀಡಿರುವ ಅಂಕಿ-ಅಂಶಗಳೇ ಈ ಸಂಗತಿಯನ್ನು ದೃಢಪಡಿಸಿವೆ. ವಿಪರ್ಯಾಸವೆಂದರೆ ಕೊರೊನಾ ಪರಿಣಾಮ ಹೊಸ ವ್ಯಾಪಾರ ಆರಂಭಿಸಲು ಮುಂದೆ ಬರುವವರ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಕಳೆದ ವರ್ಷ ಬೆಳಗಾವಿಯಲ್ಲಿ 2,315 ವ್ಯಾಪಾರಿಗಳು ಪರವಾನಗಿ ನವೀಕರಿಸಿಕೊಂಡಿದ್ದರು. ಪ್ರಸಕ್ತ ವರ್ಷ ಕೇವಲ 340 ವ್ಯಾಪಾರಿಗಳು ಮಾತ್ರ ಮುಂದೆ ಬಂದಿದ್ದಾರೆ. 1,975 ಅಂಗಡಿ ಮಾಲೀಕರು ಪರವಾನಗಿ ನವೀಕರಿಸಿಕೊಳ್ಳುವ ಸುದ್ದಿಗೇ ಹೋಗಿಲ್ಲ. ಕಳೆದ ವರ್ಷ ಹೊಸದಾಗಿ 945 ವ್ಯಾಪಾರಿಗಳು ಪರವಾನಗಿ ಪಡೆದಿದ್ದರೆ, ಆದರೆ, ಈ ಬಾರಿ 65 ಜನರು ಮಾತ್ರ ಪರವಾನಗಿ ಪಡೆದುಕೊಂಡಿದ್ದಾರೆ.
ಪಾಲಿಕೆಗೆ ಕೋಟಿ ನಷ್ಟ: ಕಳೆದ ವರ್ಷ ಮಹಾನಗರ ಪಾಲಿಕೆಗೆ ₹1.20 ಕೋಟಿ ಆದಾಯ ಹರಿದು ಬಂದಿತ್ತು. ಪ್ರಸಕ್ತ ವರ್ಷ 340 ಅಂಗಡಿಗಳ ಪರವಾನಗಿ ನವೀಕರಣ ಹಾಗೂ ಹೊಸದಾಗಿ 65 ಪರವಾನಗಿ ನೀಡಲಾಗಿದ್ದು, ಕೇವಲ ₹6.8 ಲಕ್ಷ ಸಂಗ್ರಹವಾಗಿದೆ. ಪಾಲಿಕೆಗೆ ₹1.4 ಕೋಟಿ ನಷ್ಟವಾಗಿದೆ. ಡೋರ್ ಟು ಡೋರ್ಗೆ ತೆರಳಿ ವ್ಯಾಪಾರಿಗಳ ಮನವೊಲಿಸಿ ಪರವಾನಗಿ ನವೀಕರಣ ಮಾಡಿಸಿಕೊಳ್ಳುವಂತೆ ಮನವಿ ಮಾಡಲಾಗುವುದು. ಡಿಸೆಂಬರ್ ಅಂತ್ಯಕ್ಕೆ ಶೇ.60ರಷ್ಟು ಪರವಾನಗಿ ನವೀಕರಣ ಗುರಿ ಮುಟ್ಟಲಾಗುವುದು ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ಸಂಜಯ್ ಡುಮ್ಮಗೋಳ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.