ಕರ್ನಾಟಕ

karnataka

By ETV Bharat Karnataka Team

Published : Oct 18, 2023, 10:22 AM IST

Updated : Oct 18, 2023, 12:46 PM IST

ETV Bharat / state

ಬೆಳಗಾವಿ ಅಬಕಾರಿ ಅಧಿಕಾರಿಗಳ ಭರ್ಜರಿ ಬೇಟೆ.. ಲಾರಿಯಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 10 ಲಕ್ಷ ರೂ. ಮೌಲ್ಯದ ಗೋವಾ ಮದ್ಯ ಜಪ್ತಿ

ಬೆಳಗಾವಿ ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಲಾರಿಯಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ಅಕ್ರಮ ಮದ್ಯವನ್ನು ಜಪ್ತಿ ಮಾಡಿದ್ದಾರೆ.

liquor
ಬೆಳಗಾವಿ ಅಬಕಾರಿ ಅಧಿಕಾರಿಗಳಿಂದ ದಾಳಿ

ಬೆಳಗಾವಿ ಅಬಕಾರಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ

ಬೆಳಗಾವಿ : ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ ಅಕ್ರಮವಾಗಿ ಮದ್ಯ ಸಾಗಣೆ ಸದ್ದಿಲ್ಲದೇ ನಡೆಯುತ್ತಿದೆ. ಈ ಬೆನ್ನಲ್ಲೇ ಗೋವಾದಿಂದ ತೆಲಂಗಾಣಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಮದ್ಯವನ್ನು ಜಪ್ತಿ ಮಾಡುವಲ್ಲಿ ಬೆಳಗಾವಿಯ ಅಬಕಾರಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳು ಲಾರಿಯಲ್ಲಿ ಪ್ಲೈವುಡ್ ನಡುವೆ ಮದ್ಯದ ಬಾಕ್ಸ್​ಗಳನ್ನು ಇಟ್ಟುಕೊಂಡು ಸಾಗಿಸುತ್ತಿದ್ದಾಗ ಸಿನಿಮೀಯ ಶೈಲಿಯಲ್ಲಿ ದಾಳಿ ಮಾಡಿ, ಅಕ್ರಮ ಜಾಲ‌ ಭೇದಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು, ಈ ಬಾರಿಯೂ ಅದೇ ಮಾದರಿಯಲ್ಲಿ ದಾಳಿ ನಡೆಸಿ ನಕಲಿ ಟ್ರಾನ್ಸ್​ಫಾರ್ಮರ್ ಸಾಗಿಸುತ್ತಿದ್ದ ಲಾರಿಯಲ್ಲಿ ಬಚ್ಚಿಟ್ಟಿದ್ದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ನಿನ್ನೆ (ಮಂಗಳವಾರ) ದಾಳಿ ಮಾಡಿದ ಅಧಿಕಾರಿಗಳು, ಎಂಎಚ್ 43 ವೈ 2976 ನಂಬರ್​ನ ಲಾರಿ ತಡೆದು ಚಾಲಕನ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಎರಡು ಎಲೆಕ್ಟ್ರಿಕ್ ಟ್ರಾನ್ಸ್​ಫಾರ್ಮರ್​ಗಳ ನಡುವೆ ಬಚ್ಚಿಟ್ಟಿದ್ದ 10 ಲಕ್ಷ ರೂ. ಮೌಲ್ಯದ 250 ರಟ್ಟಿನ ಪೆಟ್ಟಿಗೆಗಳಲ್ಲಿದ್ದ 5 ವಿವಿಧ ಕಂಪನಿಯ‌ ಮದ್ಯವನ್ನು ಜಪ್ತಿ ಮಾಡಿರುವ ಅಬಕಾರಿ ಅಧಿಕಾರಿಗಳು‌, ಆರೋಪಿ ಲಾರಿ ಚಾಲಕ ಮಹಾರಾಷ್ಟ್ರದ ಮುಂಬೈ ನಿವಾಸಿ ಶ್ರೀರಾಮ್ ಸುಧಾಕರ್ ಪರಡೇ(31) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ‌. ಅದೇ ರೀತಿ 20 ಲಕ್ಷ ರೂ. ಮೌಲ್ಯದ ಲಾರಿಯ‌ನ್ನೂ ಜಪ್ತಿ ಮಾಡಲಾಗಿದೆ.

ಲಾರಿಗೆ ಜಿಪಿಎಸ್ ಅಳವಡಿಕೆ :ವಾಹನದಲ್ಲಿದ್ದ ಅತ್ಯಾಧುನಿಕ ತಂತ್ರಜ್ಞಾನ ಜಿಪಿಎಸ್ ಉಪಕರಣ ಬಳಸಿ ನಿಯಂತ್ರಿಸಲಾಗುತ್ತಿತ್ತು. ಅಬಕಾರಿ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ವಾಹನ ಮುಂದೆ ಹೋಗದಂತೆ ಖದೀಮರು ಜಿಪಿಎಸ್ ಆಫ್​ ಮಾಡಿದ್ದರು. ಎಲ್ಲೋ ಒಂದು ಕಡೆ ಇದ್ದ ತಂಡ, ಲಾರಿಯನ್ನು‌ ಅಲ್ಲಿಂದಲೇ ನಿಯಂತ್ರಿಸುತ್ತಿತ್ತು. ಇದನ್ನರಿತ ಅಬಕಾರಿ ಪೊಲೀಸರ ತಂಡದವರು ಜಿಪಿಎಸ್ ​ಕನೆಕ್ಟ್ ಮಾಡಿ ವಾಹನ ಜಪ್ತಿ ಮಾಡಿದ್ದಾರೆ.

ಚುನಾವಣೆ ಎಫೆಕ್ಟ್ :ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ ತೆಲಂಗಾಣ ರಾಜ್ಯದಲ್ಲೂ ಚುನಾವಣೆ ಇರುವುದರಿಂದ ಗೋವಾದಿಂದ ಮದ್ಯ ಸಾಗಿಸಲಾಗುತ್ತಿತ್ತು. ಟ್ರಾನ್ಸ್​ಫಾರ್ಮರ್​ಗಳ ಮಧ್ಯೆ ಮದ್ಯದ ಬಾಕ್ಸ್​ಗಳನ್ನು ಇಟ್ಟರೆ ಯಾರಿಗೂ ಅನುಮಾನ ಬರುವುದಿಲ್ಲವೆಂದು ಆರೋಪಿಗಳು ಅಂದುಕೊಂಡಿದ್ದರು. ಆದರೆ, ಅಬಕಾರಿ‌ ಅಧಿಕಾರಿಗಳ ಚಾಕಚಕ್ಯತೆಯಿಂದ ಅವರ ಪ್ಲಾನ್ ಉಲ್ಟಾ ಆಗಿದೆ. ಅಲ್ಲದೇ, ಯಾವ ಪಕ್ಷ?, ಯಾವ ಅಭ್ಯರ್ಥಿಗೆ ಈ ಮದ್ಯ ಸೇರಿದೆ ಎಂಬುದು ತನಿಖೆಯಿಂದ ತಿಳಿದು ಬರಲಿದೆ‌.

ಅಪರ ಅಬಕಾರಿ ಆಯುಕ್ತ ಡಾ. ವೈ. ಮಂಜುನಾಥ್, ಅಬಕಾರಿ ಜಂಟಿ ಆಯುಕ್ತ ಫಿರೋಜ್ ಖಾನ್ ಕಿಲ್ಲೆದಾರ್, ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಂ ಅವರ ಮಾರ್ಗದರ್ಶನದಲ್ಲಿ, ಅಬಕಾರಿ ಅಧೀಕ್ಷಕ ವಿಜಯ್ ಕುಮಾರ್ ಹಿರೇಮಠ್ ನೇತೃತ್ವದ ತಂಡವು ದಾಳಿ ಮಾಡಿದೆ.

ಕಾರ್ಯಾಚರಣೆ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅಪರ ಅಬಕಾರಿ ಆಯುಕ್ತ ಡಾ. ವೈ. ಮಂಜುನಾಥ್, "ವಾಹನವನ್ನು ಜಿಪಿಎಸ್ ಮೂಲಕ ಆನ್ ಅಂಡ್ ಆಫ್ ಮಾಡುವಷ್ಟು ಖದೀಮರು ಸಕ್ರಿಯರಾಗಿದ್ದರು. ಲಾರಿ ಹಿಡಿದ ತಕ್ಷಣ ಜಿಪಿಎಸ್ ಮೂಲಕ ವಾಹನವನ್ನು ಆಫ್​ ಮಾಡಿದರು. ನಂತರ ಜಿಪಿಎಸ್ ಡಿಸ್​ಕನೆಕ್ಟ್ ಮಾಡಿ ವಾಹನ ಜಪ್ತಿ ಮಾಡಿದ್ದೇವೆ. ಆರೋಪಿಗಳು ಯಾವುದೇ ರೀತಿ ಯತ್ನಿಸಿದರೂ ನಮ್ಮಲ್ಲಿ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯ ಇದ್ದಿದ್ದರಿಂದಲೇ ಪ್ರಕರಣ ಭೇದಿಸಲು ಸಾಧ್ಯವಾಗಿದೆ. ಜಾಲವೊಂದು ನಿರಂತರವಾಗಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದೆ. ಅವರನ್ನು ಬಲೆಗೆ ಕೆಡವಲು ತಂಡ ರಚಿಸಿದ್ದೇವೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದರ ಬಗ್ಗೆಯೂ ತನಿಖೆ ನಡೆಸುತ್ತೇವೆ" ಎಂದರು.

ಇದನ್ನೂ ಓದಿ :ಕುಡಿದು ಟೈಟ್ ​: ಬೈಕ್ ಓಡಿಸಲಾಗದೇ ನಡು ರಸ್ತೆಯಲ್ಲೇ ಮಲಗಿದ ಭೂಪ - ವಿಡಿಯೋ

ಇನ್ನು ಕಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಗೋವಾಕ್ಕೂ ಹೋಗಿ ತನಿಖೆ ಮಾಡಿದ್ದು, ಅಲ್ಲಿನ ಡಿಸ್ಟಿಲ್ಲರೀಸ್ ನವರು ನಾವು ಅಧಿಕೃತವಾಗಿ ಮದ್ಯ ಮಾರಾಟ ಮಾಡಿದ್ದೇವೆ ಎನ್ನುತ್ತಿದ್ದಾರೆ. ಇದು ನಮಗೆ ಸಮಸ್ಯೆಯಾಗಿದೆ. ಆ ತನಿಖೆಯನ್ನೂ ಮುಂದುವರಿಸಿದ್ದೇವೆ ಎಂದು ಡಾ. ವೈ.ಮಂಜುನಾಥ್​ ತಿಳಿಸಿದರು.

Last Updated : Oct 18, 2023, 12:46 PM IST

ABOUT THE AUTHOR

...view details