ಬೆಂಗಳೂರು: ಜಾರಿ ನಿರ್ದೇಶನಾಲಯದ((ED)ಕರೆ ಹಿನ್ನೆಲೆ ಮಾಜಿ ಸಚಿವ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಜಮೀರ್ ಅಹ್ಮದ್ಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿದ ಹಿನ್ನೆಲೆ ಅವರು ದೆಹಲಿಗೆ ತೆರಳಿದ್ದಾರೆ.
ವಿಚಾರಣೆಗೆ ED ಬುಲಾವ್: ದೆಹಲಿಗೆ ತೆರಳಿದ ಜಮೀರ್ ಅಹ್ಮದ್ ಖಾನ್
ಇಡಿ(ED) ದಾಳಿಯ ಬಳಿಕ ಇದೀಗ ಶಾಸಕ ಜಮೀರ್ ಅಹ್ಮದ್ ಖಾನ್ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ಹಿನ್ನೆಲೆ ದೆಹಲಿಗೆ ತೆರಳಿರುವ ಜಮೀರ್ ನಾಳೆ ಮರಳಲಿದ್ದಾರೆ.
ಕಳೆದ ವಾರವಷ್ಟೇ ಇಡಿ(ED) ಬುಲಾವ್ ಮೇರೆಗೆ ದೆಹಲಿಗೆ ತೆರಳಿ ವಿಚಾರನೆ ಎದುರಿಸಿ ಜಮೀರ್ ವಾಪಸಾಗಿದ್ದರು. ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ದೆಹಲಿಗೆ ತೆರಳುವ ಮುನ್ನ ನಿನ್ನೆ ರಾತ್ರಿ ಡಿ.ಕೆ ಶಿವಕುಮಾರ್ ಭೇಟಿ ಮಾಡಿರುವ ಜಮೀರ್ ಸಾಕಷ್ಟು ವಿಚಾರವನ್ನು ಪ್ರಸ್ತಾಪಿಸಿ ಚರ್ಚೆ ನಡೆಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಜಮೀರ್, ಇಡಿ ಅವರ ನಿರೀಕ್ಷೆ ಹುಸಿಯಾಗಿದೆ. ನಾನು ಮನೆ ಕಟ್ಟಿಸಿದ್ದೆ ದೊಡ್ಡ ಅಪರಾಧವಾ..? ದೇಶದ ಪ್ರಬಲ ಮುಸ್ಲಿಂ ನಾಯಕರನ್ನ ಟಾರ್ಗೆಟ್ ಮಾಡಲಾಗ್ತಿದೆ. ಮುಸ್ಲಿಮರ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಕಿರುಕುಳ ನೀಡುವ ಪ್ರಯತ್ನ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಇಂತಹ ಷಡ್ಯಂತ್ರದ ಭಾಗವಾಗಿ ನನ್ನ ಮೇಲೂ ಹಲವು ರೀತಿಯ ದಾಳಿಗಳಾಗುತ್ತಿವೆ. ಇದ್ಯಾವುದಕ್ಕೂ ನಾನು ಹೆದರುವುದಿಲ್ಲ. ಇಡಿಯವರು ಯಾವ ನಿರೀಕ್ಷೆಯಿಂದ ನನ್ನ ಮೇಲೆ ದಾಳಿ ಮಾಡಿದ್ದರೋ ಆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ. ನನ್ನ ಆಸ್ತಿಯೆಂದರೆ ನನ್ನ ಜನ. ನಾನು ರಾಜಕೀಯ ಜೀವನದಲ್ಲಿರುವವರೆಗೆ ನನ್ನ ಜನ ತಲೆತಗ್ಗಿಸುವಂತ ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ.