ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿ ದಾಳಿ ಹಿನ್ನೆಲೆ ಅವರ ನಿವಾಸದತ್ತ ದೌಡಾಯಿಸಿರುವ ಅಭಿಮಾನಿಗಳು, ಕಣ್ಣೀರು ಸುರಿಸಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಜಮೀರ್ ದೋಷ ಮುಕ್ತರಾಗಲಿ ಎಂದು ಬೇಡಿಕೊಂಡರು.
ಜಮೀರ್ ನಿವಾಸದ ಬಳಿ ಅಭಿಮಾನಿಗಳ ದೌಡು ಶಾಸಕ ಜಮೀರ್ ಮನೆ ಮೇಲೆ ಇಡಿ ದಾಳಿ ವಿಷಯ ತಿಳಿದು ಸ್ಥಳಕ್ಕೆ ಟ್ಯಾನಿ ರೋಡ್ ಸೇರಿದಂತೆ ಹಲವು ಕಡೆಗಳಿಂದ ಬೆಂಬಲಿಗರು ಧಾವಿಸುತ್ತಿದ್ದಾರೆ. ಅವರ ಮನೆ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕಣ್ಣೀರು ಸುರಿಸಿ, ಶಾಸಕರು ದೋಷಮುಕ್ತರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಮಹಿಳಾ ಕಾಂಗ್ರೆಸ್ ಪ್ರತಿಭಟನೆ
ಈ ವೇಳೆ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಸಲ್ಮಾತಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಬಿಜೆಪಿ ಸರ್ಕಾರ ವಿರುದ್ಧ ಕಿಡಿಕಾರಿದರು. ಜನಸೇವೆ ಮಾಡುವ ನಮ್ಮ ನಾಯಕನ ಮನೆ ಮೇಲೆ ದಾಳಿ ಮಾಡಿರುವುದು ಸರಿಯಲ್ಲ. ಹಗರಣದಲ್ಲಿ ಸಿಲುಕಿಕೊಂಡಿರುವ ಮಹಿಳಾ ಶಾಸಕಿಗೆ ಬಿಜೆಪಿ ಸಚಿವ ಸ್ಥಾನ ನೀಡಿದೆ ಎಂದು ಪರೋಕ್ಷವಾಗಿ ಶಶಿಕಲಾ ಜೊಲ್ಲೆ ವಿರುದ್ಧ ಸಲ್ಮಾ ತಾಜ್ ಕಿಡಿಕಾರಿದರು.
ಲಾಕ್ಡೌನ್ ವೇಳೆ ಜಮೀರ್ ಅಹ್ಮದ್ ಖಾನ್ ಅವರು ನಿರಂತರ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಬಡವರಿಗೆ ಫುಡ್ ಕಿಟ್, ಹಣಕಾಸಿನ ಸಹಾಯ ಮಾಡಿದ್ದರು. ನಿಸ್ವಾರ್ಥ ಸೇವೆ ಮಾಡಿದ ವ್ಯಕ್ತಿಯ ಮೇಲೆ ದಾಳಿ ಮಾಡಿರುವುದು ಖಂಡನೀಯ ಎಂದು ಅಕ್ರೋಶ ವ್ಯಕ್ತಪಡಿಸಿದರು.