ಬೆಂಗಳೂರು: ನನ್ನ ಪ್ರಾಣ ಇರುವವರೆಗೂ ಈದ್ಗಾ ಮೈದಾನ ಏನೂ ಆಗಲು ಬಿಡುವುದಿಲ್ಲ. ಆಟದ ಮೈದಾನವಾಗಿಯೇ ಉಳಿಸುತ್ತೇನೆ ಎಂದು ಜಮೀರ್ ಅಹಮದ್ ಹೇಳಿದರು. ಈದ್ಗಾ ಮೈದಾನದ ಭೂವಿವಾದದ ಕುರಿತು ಇಂದು ಸಭೆ ನಡೆಸಲಾಯಿತು.
ಚಾಮರಾಜಪೇಟೆಯ ವೆಂಕಟರಾಮ್ ಕಲಾಭವನದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಮಾಜಿ ಸಚಿವ, ಶಾಸಕ ಜಮೀರ್ ಅಹಮದ್ ಖಾನ್, ಮಾಜಿ ಕಾರ್ಪೋರೇಟರ್ಗಳು, ಧಾರ್ಮಿಕ ಮುಖಂಡರು ಸೇರಿದಂತೆ ನಾಗರಿಕರು ಭಾಗವಹಿಸಿದ್ದರು. ಸಂಸದ ಪಿ ಸಿ ಮೋಹನ್, ಮಾಜಿ ಶಾಸಕರಾದ ಪ್ರಮೀಳಾ ನೇಸರ್ಗಿ ಸಭೆಗೆ ಗೈರಾಗಿದ್ದರು.
ಸಭೆಯ ನಂತರ ಮಾತನಾಡಿದ ಶಾಸಕ ಜಮೀರ್ ಅಹ್ಮದ್, ಎಲ್ಲರೂ ಆಟದ ಮೈದಾನ ಉಳಿಸಿ ಎಂದು ಸಭೆ ಮಾಡಿದ್ದರು. ಆಟದ ಮೈದಾನ ಎಲ್ಲಿ ಹೋಗಿದೆ. ಎಂ.ಎಲ್.ಎ, ಬಿ.ಬಿ.ಎಂ.ಪಿ, ವಕ್ಫ್ ಬೋರ್ಡ್ ಯಾರಾದರೂ ಹೇಳಿಕೆ ಕೊಟ್ಟಿದ್ದರಾ? ಆಟ ಆಡೋಕೆ ಜಾಗ ಕೊಡೊಲ್ಲ ಅಂತ ಯಾರಾದರೂ ಹೇಳಿದ್ದಾರಾ? ಎಂದು ಪ್ರಶ್ನಿಸಿದರು.
ಶಾಸಕ ಜಮೀರ್ ಅಹಮದ್ ಖಾನ್ ಅವರು ಮಾತನಾಡಿದರು. 1871 ರಿಂದ ಈದ್ಗಾ ಮೈದಾನ: 1871 ರಿಂದ ಇದು ಈದ್ಗಾ ಮೈದಾನವಾಗಿದೆ. ವಾಜೀದ್ ಎನ್ನುವವರು 1954ರಲ್ಲಿ ಕೋರ್ಟ್ ಮೆಟ್ಟಿಲೇರುತ್ತಾರೆ. ಆದರೆ, ಕೇಸ್ ಡಿಸ್ಮಿಸ್ ಆಗುತ್ತದೆ. ಆಗ 1958 ರಲ್ಲಿ ಮೈಸೂರ್ ಕೋರ್ಟ್ಗೆ ಅಪೀಲ್ ಹೋಗುತ್ತಾರೆ. ಆಗ ಕೋರ್ಟ್ ನಿಮ್ಮ ದಾಖಲೆಗಳನ್ನ ಕೊಡಿ ಎಂದು ಕೇಳಿತ್ತು. ಸುಮಾರು ಒಂದೂವರೆ ವರ್ಷಗಳ ಕಾಲ ಈ ಕೇಸ್ ನಡೆದಿತ್ತು. 1959ರಲ್ಲಿ ಕೇಸ್ನ ಡಿಸ್ ಮಿಸ್ ಆಗುತ್ತದೆ. ಆಗ ನಾನಿನ್ನು ಹುಟ್ಟೇ ಇರಲಿಲ್ಲ ಎಂದು ಮೈದಾನದ ಇತಿಹಾಸದ ಬಗ್ಗೆ ಜಮೀರ್ ಮಾತನಾಡಿದರು.
1965 ರಲ್ಲಿ ಗೆಜೆಟ್:1965 ಗೆ ವಕ್ಫ್ ಬೋರ್ಡ್ಗೆ ಗೆಜೆಟ್ ಆಗುತ್ತದೆ. ಬಳಿಕ ಇದು ಹಾಗೇ ನಡೆದುಕೊಂಡು ಬಂದಿದೆ. 1972ರಲ್ಲಿ ಕಾರ್ಪೊರೇಷನ್ ನವರು ಕೋರ್ಟ್ಗೆ ಅರ್ಜಿ ಹಾಕಿದ್ದರು. ಆದರೆ, ಆಟದ ಮೈದಾನವನ್ನು ತೆಗೆಯುತ್ತೇವೆ ಎಂದು ಯಾರೂ ಹೇಳಿಲ್ಲ. ಯಾರೂ ಹೇಳದೇ ಯಾಕಿಷ್ಟು ಗೊಂದಲ ಸೃಷ್ಟಿಯಾಗಿದೆ ಎನ್ನುವುದು ಗೊತ್ತಿಲ್ಲ ಎಂದು ಹೇಳಿದರು.
ನಾನು ಚಾಮರಾಜಪೇಟೆಯ ಮನೆ ಮಗ:ಚಾಮರಾಜಪೇಟೆಯ ಮನೆ ಮಗನಾಗಿದ್ದೇನೆ. ಅದಕ್ಕಾಗಿಯೇ ಸತತ 4 ಬಾರಿಯೂ ನನ್ನನ್ನು ಗೆಲ್ಲಿಸಿದ್ದಾರೆ. ನಾನು ಜಾತಿ, ಧರ್ಮದ ವಿಚಾರವಾಗಿ ಬೇಧಬಾವ ಮಾಡಿಲ್ಲ. ಹೆಣ್ಣು ಗಂಡು ಎನ್ನುವ ಜಾತಿ ಮಾತ್ರ ಇರುವುದು ಎಂದರು.
ಬಿಜೆಪಿಯ ಮಾಜಿ ಪಾಲಿಕೆ ಸದಸ್ಯರೂ ಸಭೆಗೆ ಬಂದಿಲ್ಲ:ಕ್ಷೇತ್ರದಲ್ಲಿ ಕೋವಿಡ್ ವೇಳೆ 580 ಶವಗಳನ್ನು ಅಂತ್ಯಸಂಸ್ಕಾರ ಮಾಡಿದ್ದೇನೆ. ಹಿಂದೂ, ಮುಸ್ಲಿಂ, ಕ್ರೈಸ್ತ ಎಂದು ಯಾವುದೇ ಭೇದ - ಭಾವ ಮಾಡಿಲ್ಲ. ಈಗ ನನ್ನನ್ನು ವಿರೋಧ ಮಾಡುವವರು ಆಗ ಎಲ್ಲಿ ಹೋಗಿದ್ದರು? ನಮ್ಮ ಕ್ಷೇತ್ರದ ಎಂಪಿ ಪಿಸಿ ಮೋಹನ್ ಎಲ್ಲಿಗೆ ಹೋಗಿದ್ದರು? ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಬಿಜೆಪಿಯ ಮಾಜಿ ಪಾಲಿಕೆ ಸದಸ್ಯರೂ ಸಭೆಗೆ ಆಹ್ವಾನಿಸಿದರೂ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ:ಈ ವರ್ಷದಿಂದ ಚಾಮರಾಜಪೇಟೆ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೇವೆ. ಬೇರೆ ಯಾರೂ ಹಾರಿಸುವುದು ಬೇಡ, ನಾನೇ ಧ್ವಜ ಹಾರಿಸುತ್ತೇನೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮಾಡೋಣ. ಎಂಎಲ್ಎ ಎಂದರೆ ದೊಡ್ಡವನಲ್ಲ. ನೀವು ಆಯ್ಕೆ ಮಾಡಿ ಕಳಿಸಿದ್ದೀರಿ. ಏನೇ ಇದ್ರೂ ಕೇಳಿ ನಾನೊಬ್ಬ ಗುಲಾಮ. ನಾನು ಕ್ಷೇತ್ರದ ಜನರ ಸೇವಕ, ಹೇ ಜಮೀರ್ ಈ ಕೆಲಸ ಮಾಡು ಅಂದ್ರೆ ನಾನು ಮಾಡುತ್ತೇನೆ ಎಂದು ಹೇಳಿದರು.
ಜುಲೈ 12 ರಂದು ಚಾಮರಾಜಪೇಟೆ ಬಂದ್ ಇಲ್ಲ: ಜುಲೈ 12ರಂದು ಚಾಮರಾಜಪೇಟೆ ಬಂದ್ಗೆ ಕರೆ ಕೊಟ್ಟಿದ್ದಾರೆ. ಆಟದ ಮೈದಾನ ಉಳಿಸಿ ಎಂದು ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ಆದರೆ ಯಾಕೆ ಬಂದ್ ಕರೆದಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಅವರನ್ನೆಲ್ಲ ಕರೆದು ತಿಳಿ ಹೇಳುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ರಾಜಕೀಯ ವಿವಾದ ಸೃಷ್ಟಿ:ಸುಮ್ಮನೆ ರಾಜಕೀಯ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಇದೆಲ್ಲ ನನಗೆ ಗೊತ್ತಿದೆ. ಇದಕ್ಕೆ ಚಾಮರಾಜಪೇಟೆ ಮತದಾರರೇ ಉತ್ತರ ಕೊಡುತ್ತಾರೆ ಎಂದು ಟಾಂಗ್ ನೀಡಿದರು.
ಕುರಿ ಮಾರಾಟ ಸ್ಥಳಾಂತರ: ಸಭೆಯಲ್ಲಿ ಮೈದಾನದಲ್ಲಿ ಕುರಿ ಮಾರಾಟ ಸ್ಥಳಾಂತರಕ್ಕೆ ಜನರು ಮನವಿ ಮಾಡಿದ್ದು, ಒಂದೆಡೆ ಮಲೆ ಮಹದೇಶ್ವರ ದೇವಸ್ಥಾನ ಇದೆ. ಸುತ್ತಮುತ್ತ ಮನೆಗಳಿರುವ ಕಾರಣ ವಾಸನೆ ಬರುತ್ತಿದೆ. ಮಕ್ಕಳು ಆಟವಾಡಲು ಸ್ವಲ್ಪ ಸಮಸ್ಯೆ ಆಗುತ್ತಿದೆ ಎಂದು ಜನರು ಸಮಸ್ಯೆ ತೋಡಿಕೊಂಡಿದ್ದಾರೆ. ಸ್ಥಳೀಯರು ಏನು ಹೇಳುತ್ತಾರೋ ಅದಕ್ಕೆ ಬದ್ದ ಎಂದು ಜಮೀರ್ ಹೇಳಿದರು.
ಮಾಧ್ಯಮದವರಿಂದ ಗೊಂದಲ: ಈ ಮಧ್ಯೆ ಇಷ್ಟೆಲ್ಲ ಗೊಂದಲ ಸೃಷ್ಟಿ ಮಾಡುತ್ತಿರುವುದು ಮಾಧ್ಯಮದವರು, ನಿಮಗೆ ಕೈ ಮುಗಿಯುತ್ತೇನೆ ಎಂದು ಇದೇ ವೇಳೆ ಮನವಿ ಮಾಡಿಕೊಂಡರು.
ಓದಿ:ಪಿಎಸ್ಐ ಹಗರಣದಲ್ಲಿ ಎಷ್ಟೇ ದೊಡ್ಡ ರಾಜಕಾರಣಿ ಇದ್ದರೂ ಕ್ರಮ ಕೈಗೊಳ್ಳಿ: ಹೆಚ್.ವಿಶ್ವನಾಥ್