ಬೆಂಗಳೂರು: ಪಾದರಾಯನಪುರದಲ್ಲಿ ಅಹಿತಕರ ಘಟನೆ ನಡೆಯಬಾರದಿತ್ತು. ಇದು ತಪ್ಪು, ಇದನ್ನು ಖಂಡಿಸುತ್ತೇನೆ ಎಂದು ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ ಬಿಬಿಎಂಪಿ ಆಯುಕ್ತರಿಗೆ ಈ ಬಗ್ಗೆ ಹೇಳಿದ್ದೆ. ಸೂಕ್ಷ್ಮ ಸ್ಥಳಗಳಿಗೆ ರಾತ್ರಿ ವೇಳೆ ಹೋಗುವುದು ಬೇಡ. ಬೆಳಗ್ಗೆ ಹೋಗುವುದೇ ಸರಿ. ಬೆಳಗ್ಗೆ ಹೋಗಿದ್ದರೆ ಗಲಾಟೆ ಆಗುತ್ತಿರಲಿಲ್ಲ. ರಾತ್ರಿ ಹೋಗುವುದು ತಪ್ಪು ಅಂತಾ ಹೇಳಲ್ಲ. ಆದರೆ, ನಮ್ಮ ಗಮನಕ್ಕೆ ತರಬೇಕಾಗಿತ್ತು ಎಂದಿದ್ದಾರೆ.
ಯಾರೇ ತಪ್ಪು ಮಾಡಿದ್ದರೂ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದ ಜಮೀರ್, ಇದು ರಾಜಕೀಯ ಪಿತೂರಿ ಎಂದು ಟ್ವೀಟ್ ಮಾಡಿದ್ದನ್ನು ಹಿಂಪಡೆದರು. ಈ ರೀತಿ ನನ್ನ ಪಿಎ ಟ್ವೀಟ್ ಮಾಡಿದ್ದಾರೆ. ನಿನ್ನೆಯ ಘಟನೆ ರಾಜಕೀಯ ಪಿತೂರಿಯಲ್ಲ ಎಂದು ಸ್ಪಷ್ಟನೆ ನೀಡಿದರು.
ಪಾದರಾಯನಪುರ ಘಟನೆ ಕುರಿತು ಶಾಸಕ ಜಮೀರ್ ಅಹಮದ್ ಪ್ರತಿಕ್ರಿಯೆ ಇದೇ ವೇಳೆ ಸಿ ಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರ ಹೇಳಿಕೆಗೆ ಟಾಂಗ್ ಕೊಟ್ಟ ಶಾಸಕ ಜಮೀರ್ ಅಹಮದ್, ರೇಣುಕಾಚಾರ್ಯ ನನ್ನನ್ನು ಕ್ವಾರಂಟೈನ್ ಮಾಡಬೇಕು ಎಂದಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಕೊರೊನಾ ಪೀಡಿತರಾಗಿ ಸಾವನ್ನಪ್ಪಿದ ಮಹಿಳೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದೆ. ಬೇಕಾದರೆ ರೇಣುಕಾಚಾರ್ಯ ಕ್ಷೇತ್ರದಲ್ಲೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದರು.