ಬೆಂಗಳೂರು: ಜೆ.ಜೆ. ನಗರದಲ್ಲಿ ನಡೆದ ಯುವಕನ ಹತ್ಯೆ ಪ್ರಕರಣದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ್ದ ಹೇಳಿಕೆಗೆ ಶಾಸಕ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ. "ಮೊನ್ನೆ ನಡೆದಿರುವ ಘಟನೆ ನಿಜಕ್ಕೂ ಅಕ್ಷಮ್ಯ ಮತ್ತು ಖಂಡನೀಯ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಗೃಹ ಸಚಿವರು ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಏನೇ ಹೇಳಿಕೆ ಕೊಡಬೇಕಾದರೂ ಹತ್ತಾರು ಬಾರಿ ಯೋಚಿಸಿ, ಸೂಕ್ತ ಮಾಹಿತಿ ಪಡೆದು ಹೇಳಬೇಕು ಎಂದರು.
ಮಾಧ್ಯಮದವರೊಂದಿಗೆ ಜೊತೆ ಮಾತನಾಡಿದ ಅವರು, ಯಾವ ಆಧಾರದ ಮೇಲೆ ಈ ರೀತಿ ಹೇಳಿಕೆ ನೀಡಿದ್ದರೋ ಗೊತ್ತಿಲ್ಲ. ಬಳಿಕ ಪೊಲೀಸ್ ಆಯುಕ್ತ ಕಮಲ್ ಪಂತ್ ಘಟನೆ ಕುರಿತು ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದ ಮೇಲೆ ಗೃಹ ಸಚಿವರೇ ಖುದ್ದು ನನ್ನಿಂದ ತಪ್ಪು ಮಾಹಿತಿ ಹೋಗಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ರೀತಿ ರಾಜಕಾರಣ ಮಾಡಿ ಅವರೆಲ್ಲ ಅದೇನು ಸಾಧಿಸಲು ಹೊರಟಿದ್ದಾರೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಘಟನೆ ನಡೆದಿದ್ದು ಏಪ್ರಿಲ್ 5ರ ಮಧ್ಯರಾತ್ರಿ 2.30ಕ್ಕೆ. ಯುವಕ ಮೃತಪಟ್ಟಿದ್ದು 3.30 ರ ಸುಮಾರಿಗೆ. ನಾವು ಆ ಯುವಕನ ಶವದ ಮರಣೋತ್ತರ ಪರೀಕ್ಷೆಯಿಂದ ಹಿಡಿದು ಕುಟುಂಬಸ್ಥರಿಗೆ ಶವ ವರ್ಗಾಯಿಸೋವರೆಗೂ ಜೊತೆಗಿದ್ದೆವು. ಆತನ ಕುಟುಂಬದವರಿಗೆ ಸಾಂತ್ವನ ಹೇಳಿ, 2 ಲಕ್ಷ ರೂ. ಪರಿಹಾರ ಕೊಟ್ಟಿದ್ದೇವೆ. ಮನ ಬಂದಂತೆ ಹೇಳಿಕೆ ಕೊಟ್ಟು ರಾಜಕೀಯ ಮಾಡುತ್ತಾ, ಯುವಕನ ಮನೆಗೆ ಭೇಟಿ ನೀಡುತ್ತಿರುವ ಬಿಜೆಪಿ ನಾಯಕರು ನಿನ್ನೆ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು.