ಬೆಂಗಳೂರು :ನಾಡಿನ ಜನರ ಬದುಕಿನಲ್ಲಿ ಸಿಹಿ ಹೆಚ್ಚಿರಲಿ. ಕಹಿ ಕಡಿಮೆಯಾಗಲಿ. ಸುಖ, ಶಾಂತಿ ನೆಮ್ಮದಿಯ ಬದುಕು ಜನತೆಯದ್ದಾಗಲಿ ಎನ್ನುವ ಹಾರೈಕೆಯೊಂದಿಗೆ ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯುಗಾದಿ ಹಬ್ಬದ ಶುಭ ಕೋರಿದ್ದಾರೆ. ಯುಗ ಯುಗಾದಿ ಕಳೆದರೂ ಮತ್ತೆ ಯುಗಾದಿ ಬರುತ್ತಿದೆ ಎನ್ನುವಂತೆ ಈ ಬಾರಿಯೂ ಯುಗಾದಿಯ ಹೊಸ ಸಂವತ್ಸರ ಬರುತ್ತಿದೆ. ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ತಮ್ಮ ಬದುಕಿನಲ್ಲಿ ಸಿಹಿ ಇರಲಿ. ಬೇವು ಕಡಿಮೆ ಇರಲಿ. ಬೆಲ್ಲ ಜಾಸ್ತಿ ಇರಲಿ. ಇಡೀ ವರ್ಷ ಎಲ್ಲ ರೀತಿಯ ಸುಖ ಶಾಂತಿ ನೆಮ್ಮದಿ ಆರೋಗ್ಯ ತಮ್ಮದಾಗಲಿ ಎಂದು ಹಾರೈಸುತ್ತೇನೆ ಎಂದು ಬೊಮ್ಮಾಯಿ ಯುಗಾದಿ ಹಬ್ಬದ ಶುಭ ಕೋರಿದ್ದಾರೆ.
ಯುಗಾದಿ ಶುಭಾಶಯ ಕೋರಿದ ಬಿಎಸ್ವೈ : ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ನೂತನ ಸಂವತ್ಸರ ನಾಡಿಗೆ, ನಮ್ಮೆಲ್ಲರ ಬದುಕಿಗೆ ಸುಖ-ಸಮೃದ್ಧಿ, ಉತ್ತಮ ಆರೋಗ್ಯ, ಹೊಸ ಭರವಸೆ, ನವ ಚೈತನ್ಯ ತರಲಿ ಎಂದು ಹಾರೈಸುತ್ತೇನೆ ಎಂದು ಬಿಜೆಪಿ ಹಿರಿಯ ನಾಯಕ ಹಾಗು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಜನತೆಗೆ ಶುಭ ಕೋರಿದ್ದಾರೆ.
''ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೇವು-ಬೆಲ್ಲಗಳ ಸಮಾಗಮವೇ ಬದುಕಿನ ವೈಶಿಷ್ಟ್ಯ ಎಂಬ ಸಂದೇಶದೊಂದಿಗೆ, ಯುಗದ ಹಬ್ಬವನ್ನು ಆಚರಿಸಿ ಸಂಭ್ರಮಿಸೋಣ. ಸರ್ವಜನ ಹಿತದ, ಸಾಮರಸ್ಯದ ಹೊಸ ಬೆಳಕು ನಾಡಿನೆಲ್ಲೆಡೆ ಬೆಳಗಲಿ ಎಂದು ಈ ಶುಭದಿನದಂದು ಹಾರೈಸುತ್ತೇನೆ'' ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್. ಡಿ ದೇವೇಗೌಡ ಯುಗಾದಿ ಶುಭಾಶಯ ಕೋರಿದ್ದಾರೆ.
''ಮಾವು ನಾವು, ಬೇವು ನಾವು; ನೋವು ನಲಿವು ನಮ್ಮವು. ಹೂವು ನಾವು, ಹಸಿರು ನಾವು, ಬೇವು ಬೆಲ್ಲ ನಮ್ಮವು. ನಾಡಿನ ಸಮಸ್ತ ಜನತೆಗೆ ನವ ಮನ್ವಂತರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಸಕಲ ಜೀವರಾಶಿಗಳಿಗೂ ಹೊಸ ಜನ್ಮ, ಹೊಸ ಹರುಷ ತರುವ ಈ ಚೈತ್ರವು ಎಲ್ಲರ ಬಾಳಿನಲ್ಲಿ ಸಿಹಿ ಹೆಚ್ಚಿಸಲಿ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶುಭ ಹಾರೈಸಿದ್ದಾರೆ.