ಬೆಂಗಳೂರು: ಅಪಾರ ಸಂಖ್ಯೆಯ ಬೆಂಬಲಿಗರ ಸಮ್ಮುಖದಲ್ಲಿ ಮುಳಬಾಗಿಲು ಶಾಸಕ ಎಚ್ ನಾಗೇಶ್ ಹಾಗೂ ಕಡೂರು ಮಾಜಿ ಶಾಸಕ ವೈಎಸ್ವಿ ದತ್ತ ಕಾಂಗ್ರೆಸ್ಗೆ ಸೇರ್ಪಡೆಯಾದರು. ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ ಸಚಿವರು ಆಗಿದ್ದ ಹೆಚ್ ನಾಗೇಶ್ ಮತ್ತು ದತ್ತ ಜೆಡಿಎಸ್ ತೊರೆದು ಕೈ ಸೇರಿದರು. ಸಮಾರಂಭದಲ್ಲಿ ಮೈಸೂರು ಮೂಡ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಕೋಲಾರ ಭಾಗದ ಮುಖಂಡ ದಯಾನಂದ ಮತ್ತಿತರ ನಾಯಕರು ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರ ಜತೆ ಕಾಂಗ್ರೆಸ್ ಸೇರ್ಪಡೆಯಾದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಧ್ರುವ ನಾರಾಯಣ, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಬೈರತಿ ಸುರೇಶ್ ಸೇರಿದಂತೆ ಹಲವು ನಾಯಕರ ಉಪಸ್ಥಿತರಿದ್ದರು.
ನಾಯಕರನ್ನು ಸೇರ್ಪಡೆ ಮಾಡಿಕೊಂಡು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಕರ ಸಂಕ್ರಮಣ ರೈತರ ಬದುಕು ಶುಭಾರಂಭ ಆಗುವ ಕ್ಷಣ. ಇಂಥಾ ಪವಿತ್ರ ದಿನದಂದು ವೈಎಸ್ವಿ ದತ್ತಾ ಹಾಗೂ ಎಚ್ ನಾಗೇಶ್ ಅವರು ಪಕ್ಷ ಸೇರಿದ್ದಾರೆ. ಶಾಸಕ ಎಚ್ ನಾಗೇಶ್ ಇಂದು ಕಾಂಗ್ರೆಸ್ ಪಕ್ಷದ ಸಹ ಸದಸ್ಯತ್ವ ಪಡೆಯುತ್ತಿದ್ದಾರೆ. ವೈಎಸ್ವಿ ದತ್ತಾ ಅವರು ಸುಮಾರು 48 ವರ್ಷಗಳಿಂದ ನನಗೆ ಗೊತ್ತಿದ್ದಾರೆ. ನಾನು ವಿದ್ಯಾರ್ಥಿ ದೆಸೆಯಲ್ಲಿದ್ದಾಗಿನಿಂದ ಅವರೊಂದಿಗೆ ಒಡನಾಟವಿದೆ ಎಂದರು.
ಆಡಳಿತ ಪಕ್ಷದ ವಿರುದ್ಧ ದಿನೇ ದಿನೇ ವಿಶ್ವಾಸ ಕಡಿಮೆ ಆಗುತ್ತಿದೆ. ಜನರಿಗೆ ಉತ್ತಮ ಆಡಳಿತ ಕೊಡುವುದಕ್ಕೆ ಆಗುತ್ತಿಲ್ಲ ಎಂದು ಬಹಳ ಜನ ನಮ್ಮ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ. ಬಿಜೆಪಿ ಕೊಟ್ಟ ಅಧಿಕಾರವನ್ನು ತ್ಯಾಗ ಮಾಡಿ ನಾಗೇಶ್ ಪಕ್ಷ ಸೇರ್ಪಡೆ ಆಗಲು ಬಂದಿದ್ದಾರೆ. ದತ್ತಾ ಅವರು ಪಾಠ ಹೇಳುವಾಗ ನ್ಯಾಷನಲ್ ಕಾಲೇಜಿನಲ್ಲಿ ನಾನು ಸ್ಟೂಡೆಂಟ್ ಆಗಿದ್ದೆ. ಕಡೂರು ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದವರು. ಜೆಡಿಎಸ್ನಲ್ಲಿ ಹಲವು ಹುದ್ದೆಗಳಿದ್ದವರು. ಅಲ್ಲಿ ನಮಗೆ ಭವಿಷ್ಯ ಇಲ್ಲ ಎಂಬುದನ್ನ ಗಮನದಲ್ಲಿಟ್ಟುಕೊಂಡು ಪಕ್ಷಕ್ಕೆ ಬಂದಿದ್ದಾರೆ. ಮೈಸೂರಿನ ಮೂಡ ಅಧ್ಯಕ್ಷರಾಗಿದ್ದವರು ಮೋಹನ್ ಹಿಂದೆ ಪಕ್ಷದಲ್ಲಿ ಕೆಲಸ ಮಾಡಿದ್ದವರು. ಬಿಜೆಪಿ ತೊರೆದು ಪಕ್ಷ ಸೇರ್ಪಡೆ ಆಗಿದ್ದಾರೆ. ಈ ಮೂವರ ಜೊತೆ ಪಕ್ಷ ಸೇರುತ್ತಿರುವ ಎಲ್ಲರಿಗೂ ಕಾಂಗ್ರೆಸ್ ವತಿಯಿಂದ ಸ್ವಾಗತ ಕೋರಿದರು.
ಇಂದು ಆರಂಭ ಇನ್ನೂ ಬಹಳಷ್ಟು ಜನ ಸೇರುವವರಿದ್ದಾರೆ:ಇದು ಆರಂಭ ಅಷ್ಟೇ. ಇನ್ನು ಮುಂದೆ ವಾರಕ್ಕೊಮ್ಮೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಇರಲಿದೆ. ಮುಂದೆ ಪ್ರವಾಸಕ್ಕೆ ಹೋದಾಗ ಅಲ್ಲಿಯೂ ಸೇರ್ಪಡೆ ಆಗುವ ಕಾರ್ಯಕ್ರಮಗಳು ಇವೆ. ಮತ್ತಷ್ಟು ಜನ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಸಾಕಷ್ಟು ಸರ್ವೆಗಳಾಗಿವೆ, ಎಲ್ಲವೂ ನಮ್ಮ ಪರವಾಗಿವೆ. ಸ್ವಂತ ಬಲದ ಮೇಲೆ ನಾವು ಅಧಿಕಾರಕ್ಕೆ ಬರುತ್ತೇವೆ. ಪಕ್ಷಕ್ಕೆ ಸೇರುವವರೆಲ್ಲರೂ ಕಾರ್ಯಕರ್ತರಾಗಿ, ನಾಯಕರಾಗಿ ದುಡಿಯಬೇಕು.