ಬೆಂಗಳೂರು:ಕಿಡ್ನಾಪ್ ಆದ ಮಗ ಇನ್ನೂ ಮನೆಗೆ ಬಂದಿಲ್ಲವೆಂದು ಪೋಷಕರು ಕಂಗಾಲಾಗಿದ್ದರೆ, ಅದೇ ಮನೆಯಲ್ಲಿ ಮಗನ ಸ್ನೇಹಿತನೇ ಕಳ್ಳತನ ಮಾಡಿದ್ದಾನೆ. ಅತ್ತ ಸ್ನೇಹಿತ ಸತ್ತು ಬಿದ್ದಿದ್ರೆ, ಇತ್ತ ಕದ್ದ ಹಣದೊಂದಿಗೆ ಆರೋಪಿ ಪರಾರಿಯಾಗಿದ್ದಾನೆ. ನಗರದ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಏರಿಯಾದಲ್ಲಿ ಹವಾ ಮೇಂಟೈನ್ ಮಾಡುವ ವಿಚಾರಕ್ಕೇ ಉಂಟಾದ ಕಲಹದಲ್ಲಿ ಪ್ರಜ್ವಲ್ ಹಾಗೂ ಆತನ ಗ್ಯಾಂಗ್ ಸುಹಾಸ್ ಎಂಬಾತನನ್ನು ಮಾತನಾಡುವುದಾಗಿ ಕರೆದು ಕೊಲೆ ಮಾಡಿದ್ದರು. ಕೊಲೆಯಾದ ಮರುದಿನ ಮೇ 10ರಂದು ಸುಹಾಸ್ ಪೋಷಕರು ಕಿಡ್ನಾಪ್ ದೂರು ನೀಡಲು ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ಬಂದಿದ್ದರು.
ಆದರೆ, ಇದೇ ಸಮಯವನ್ನು ಬಳಸಿಕೊಂಡ ಸುಹಾಸ್ ಸ್ನೇಹಿತ ಸಾಗರ್ ಮಿತ್ರದ್ರೋಹಿ ಕೃತ್ಯ ಎಸಗಿದ್ದಾನೆ. ಸುಹಾಸ್ ಮನೆಯ ಬೀರುವಿನಲ್ಲಿದ್ದ 70 ಸಾವಿರ ರೂ. ಕದ್ದು ಪರಾರಿಯಾಗಿದ್ದಾನೆ. ಕೊಲೆಯಾದ ಗೆಳೆಯನ ಮನೆಯಿಂದಲೇ ಹಣ ಕದ್ದೊಯ್ದು ಮಜಾ ಮಾಡುತ್ತಿದ್ದಾನೆ.
ಪ್ರಕರಣದ ಹಿನ್ನೆಲೆ?:ಸುಹಾಸ್ ಸ್ನೇಹಿತ ಜೀವನ್ ಎಂಬಾತ ಮದುವೆಯಾದ ಖುಷಿಗೆ ಪಾರ್ಟಿ ಕೊಡುತ್ತೇನೆ ಎಂದಿದ್ದ. ಹಾಗಾಗಿ ಜೀವನ್ ಬೈಕ್ ಏರಿದ್ದ ಸುಹಾಸ್ ಮತ್ತು ಸಾಗರ್ ಕೂಡ್ಲುಗೇಟ್ ಕಡೆಯಿಂದ ಬರುತ್ತಿದ್ದರು. ಬೊಮ್ಮನಹಳ್ಳಿ ಕಡೆಯಿಂದ ಆಟೋದಲ್ಲಿ ಬಂದಿದ್ದ ಪ್ರಜ್ವಲ್ ಮತ್ತು ಆತನ ಗ್ಯಾಂಗ್ ಸುಹಾಸ್ನನ್ನ ವಿಟ್ಟಸಂದ್ರ ಬ್ರಿಡ್ಜ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿದೆ.
ರಾತ್ರಿಯಾದರೂ ವಾಪಸ್ ಬರದಿದ್ದಾಗ ಜೀವನ್ ಹಾಗೂ ಸಾಗರ್, ಸುಹಾಸ್ ಮನೆಗೆ ವಿಚಾರ ತಿಳಿಸಲು ದೇವರ ಚಿಕ್ಕನಹಳ್ಳಿ ಬಳಿಯಿರುವ ನಿವಾಸಕ್ಕೆ ಹೋಗಿದ್ದರು. ತಡರಾತ್ರಿ ಆಗಿದ್ದರಿಂದ ಸುಹಾಸ್ ಕಿಡ್ನಾಪ್ ವಿಷಯ ತಿಳಿಸಿ ಅಲ್ಲೇ ಊಟ ಮಾಡಿ ಮಲಗಿದ್ದರು.
ಆದರೆ, ಮನೆಯ ಬೀರುವಿನಲ್ಲಿ 70 ಸಾವಿರ ರೂ. ಹಣ ಇರುವ ವಿಚಾರ ಸಾಗರ್ಗೆ ಗೊತ್ತಾಗಿದೆ. ಯಾರಿಗೂ ತಿಳಿಯದಂತೆ ಮನೆಯ ಬೀಗವನ್ನು ತೆಗೆದು ಜೇಬಿನಲ್ಲಿಟ್ಟುಕೊಂಡಿದ್ದ. ಮೇ 10ರಂದು ಕುಟುಂಬಸ್ಥರು ಸುಹಾಸ್ ಕಾಣೆಯಾದ ಬಗ್ಗೆ ದೂರು ಕೊಡಲು ಹೋಗಿದ್ದಾಗ, ಬೀಗ ಓಪನ್ ಮಾಡಿ ಮನೆಗೆ ನುಗ್ಗಿದ್ದ ಆಸಾಮಿ 70 ಸಾವಿರ ಹಣ ಕದ್ದು ಪರಾರಿಯಾಗಿದ್ದಾನೆ.
ಮೇ 9ರಂದು ಆರೋಪಿಗಳಾದ ಪ್ರಜ್ವಲ್ ಮತ್ತು ಸ್ನೇಹಿತರಾದ ಹಿಮಾದ್ರಿ, ಜೀವನ್, ಸಚಿನ್, ರಾಕೇಶ್, ಅವಿನಾಶ್, ಸಾಗರ್ ಸೇರಿ ಸುಹಾಸ್ನನ್ನು ಕಿಡ್ನಾಪ್ ಮಾಡಿ ಕೊಂದು ಮುಗಿಸಿದರೆ, ಸ್ನೇಹಿತನ ಬಗ್ಗೆ ಚಿಂತಿಸುವುದು ಬಿಟ್ಟು ಸಾಗರ್ ಹಣ ಹೊಡೆಯುವ ಮೂಲಕ ಮಿತ್ರದ್ರೋಹಿ ಕೃತ್ಯವೆಸಗಿದ್ದಾನೆ. ಕಳ್ಳತನದ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.