ಬೆಂಗಳೂರು: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳದಲ್ಲಿ ವ್ಯಕ್ತಿಯೋರ್ವ ಸ್ನೇಹಿತನನ್ನು ಕೊಲೆ ಮಾಡಿ ಪೊಲೀಸರ ಮುಂದೆ ಶರಣಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಮ್ಮಘಟ್ಟದಲ್ಲಿ ನಡೆದಿದೆ. ಕೊಮ್ಮಘಟ್ಟ ನಿವಾಸಿ ಚೇತನ್ ಮೃತ ದುರ್ದೈವಿ. ಸ್ನೇಹಿತ ಅಮಾನುಲ್ಲಾ ಕೊಲೆಗೈದ ಆರೋಪಿ.
ಮೃತ ಚೇತನ್ ಮತ್ತು ಅಮಾನುಲ್ಲಾ ಇಬ್ಬರು ಬಹುಕಾಲದ ಗೆಳೆಯರಾಗಿದ್ದು, ಒಂದೇ ಪ್ರದೇಶದ ನಿವಾಸಿಗಳು. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆಗಾಗ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆಯುತ್ತಿತ್ತು. ಮಂಗಳವಾರ ರಾತ್ರಿ ಮತ್ತೆ ಗಲಾಟೆ ನಡೆದಿದೆ. ಪಾನಮತ್ತನಾಗಿದ್ದ ಅಮಾನುಲ್ಲಾ ಸೈಜುಗಲ್ಲನ್ನು ಚೇತನ್ ತಲೆ ಮೇಲೆ ಹಾಕಿ ಹತ್ಯೆ ಮಾಡಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಇಂದು ಬೆಳಗ್ಗೆ ಕೆಂಗೇರಿ ಪೊಲೀಸ್ ಠಾಣೆಗೆ ಹಾಜರಾದ ಅಮಾನುಲ್ಲಾ ಸ್ನೇಹಿತನನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಈತನ ಮಾತಿನಂತೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದ ಪೊಲೀಸರಿಗೆ ಚೇತನ್ ಕೊಲೆಯಾಗಿರುವ ಸಂಗತಿ ಬಯಲಿಗೆ ಬಂದಿದೆ. ಆರೋಪಿ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿ ಹೆಚ್ಚಿನ ವಿಚಾರಣೆಗೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಸ್ನೇಹಿತನನ್ನು ಹತ್ಯೆಗೈದ ಗೆಳೆಯರು :ಮದ್ಯ ಸೇವನೆ ಮಾಡಿದ ವಿಚಾರವನ್ನು ತಂದೆಗೆ ಹೇಳಿದ್ದಕ್ಕೆ ಇಬ್ಬರು ಯುವಕರು ತಮ್ಮ ಸ್ನೇಹಿತನನ್ನೇ ಹತ್ಯೆ ಮಾಡಿದ್ದ ಘಟನೆ ಇತ್ತೀಚಿಗೆ ಹಾಸನದಲ್ಲಿ ನಡೆದಿತ್ತು. ಮೃತರನ್ನು ಹಾಸನ ತಾಲೂಕಿನ ಚಿಕ್ಕಗೆಣಿಗೆರೆ ಗ್ರಾಮದ ಪ್ರಕಾಶ್ ಎಂದು ಗುರುತಿಸಲಾಗಿತ್ತು. ಈ ಸಂಬಂಧ ಪುನೀತ್ ಮತ್ತು ಯಶವಂತ್ ಎಂಬವರನ್ನು ಹಾಸನ ಪೊಲೀಸರು ಬಂಧಿಸಿದ್ದರು.