ಬೆಂಗಳೂರು: ತಮ್ಮ ಮಗಳನ್ನ ಮದುವೆ ಮಾಡಿಕೊಡುವಂತೆ ದುಂಬಾಲು ಬಿದ್ದಿದ್ದ ಯುವಕನನ್ನ ಚಾಕುವಿನಿಂದ ತಿವಿದು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ಆರೋಪದಡಿ ಯುವತಿಯ ತಂದೆಯನ್ನ ಆಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡೇವಿಡ್ (22) ಎಂಬ ಯುವಕನ ಕೊಲೆ ಮಾಡಿದ ಆರೋಪದಡಿ ವಿಲ್ಸನಗಾರ್ಡನ್ ವಿನಾಯಕ್ ನಗರದ ನಿವಾಸಿ ಮಂಜುನಾಥ್ ಎಂಬಾತನನ್ನ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಆಟೋ ಚಾಲಕನಾಗಿರುವ ಮಂಜುನಾಥ್, ಮಗಳನ್ನ ಮೃತ ಡೇವಿಡ್ ಪ್ರೀತಿಸುತ್ತಿದ್ದ. ಯುವತಿ ಸಹ ಡೇವಿಡ್ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಕೆಲ ತಿಂಗಳಿಂದ ಇಬ್ಬರು ಓಡಾಡಿಕೊಂಡಿದ್ದರು. ಈ ಮಧ್ಯೆ ತಮ್ಮ ಮಗಳನ್ನ ಮದುವೆ ಮಾಡಿಕೊಡುವಂತೆ ತಂದೆ ಮಂಜುನಾಥ್ ಬಳಿ ಡೇವಿಡ್ ನಿವೇದಿಸಿಕೊಂಡಿದ್ದ. ಇದಕ್ಕೆ ಆರೋಪಿ ಸಮ್ಮತಿ ಸೂಚಿಸಲಿರಲಿಲ್ಲ. ಇಬ್ಬರ ನಡುವೆಯೂ ಕೆಲ ದಿನಗಳಿಂದ ಮಾತಿನ ಚಕಮಕಿ ನಡೆಯುತ್ತಿತ್ತು. ಮದುವೆಗೆ ಒಪ್ಪದಿದ್ದರೆ ಮಗಳ ಜೊತೆಗಿರುವ ಫೋಟೋ ಹಾಗೂ ವಿಡಿಯೊ ವೈರಲ್ ಮಾಡುವುದಾಗಿ ಡೇವಿಡ್ ಬೆದರಿಕೆ ಹಾಕಿದ್ದ.
ಮಗಳ ಮಾನ ಮಾರ್ಯಾದೆ ಹೋಗಲಿದ್ದು, ಇದರಿಂದ ಭವಿಷ್ಯ ಹಾಳಾಗಲಿದೆ ಎಂದು ಭಾವಿಸಿದ್ದ ಮಂಜುನಾಥ್ ನಿನ್ನೆ ಸಂಜೆ 6.30 ಸುಮಾರಿಗೆ ಅಶೋಕ ನಗರದ ಸುಬ್ಬಣ್ಣ ಗಾರ್ಡನ್ ಬಳಿ ಡೇವಿಡ್ನನ್ನ ಕರೆಯಿಸಿಕೊಂಡಿದ್ದ. ಮಾತಿನ ಭರದಲ್ಲಿ ಏಕಾಏಕಿ ಡೇವಿಡ್ನನ್ನ ಚಾಕುವಿನಿಂದ ಚುಚ್ಚಿದ್ದಾನೆ. ಅಲ್ಲೇ ಇದ್ದ ಹಾಲೋಬಾಕ್ಸ್ ಕಲ್ಲಿನಿಂದ ಹೊಡೆದು ಸಾಯಿಸಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.