ಬೆಂಗಳೂರು:ಶನಿವಾರ ಸಂಜೆ ನಾಗವಾರ-ಹೆಗಡೆನಗರ ಮಾರ್ಗದ ಥಣಿಸಂದ್ರ ರೈಲ್ವೆ ಮೇಲ್ಸೇತುವೆ ಬಳಿ ಬಿಬಿಎಂಪಿಯ ಕಸದ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಬಿಬಿಎಂಪಿಯ ನಿರ್ಲಕ್ಷ್ಯವಿರುವುದು ಇದೀಗ ಬಟಾಬಯಲಾಗಿದೆ.
ಬಂಧಿತ ಕಸದ ಲಾರಿ ಚಾಲಕ ದಿನೇಶ್ ನಾಯ್ಕ್ ಬಳಿ ಲಘು ಮೋಟಾರು ವಾಹನದ (ಎಲ್ಎಂವಿ) ಲೈಸೆನ್ಸ್ ಮಾತ್ರ ಇದೆ. ಭಾರಿ ಮೋಟಾರ್ ವಾಹನ (ಹೆಚ್ಎಂವಿ)ದ ಲೈಸೆನ್ಸ್ ಇಲ್ಲದಿದ್ರೂ, ಚಲಾಯಿಸಿ ಅಪಘಾತಕ್ಕೆ ಕಾರಣವಾಗಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಬಿಬಿಎಂಪಿ ಸರಿಯಾಗಿ ಲೈಸೆನ್ಸ್ ಪರಿಶೀಲಿಸದೇ ಚಾಲನೆಗೆ ಅನುಮತಿ ನೀಡಿ ದೊಡ್ಡ ಎಡವಟ್ಟು ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಈ ಬಗ್ಗೆ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.