ಬೆಂಗಳೂರು: ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಯುವ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಇಲ್ಲಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ಧ ದಿನನಿತ್ಯ ಆಧಾರ ರಹಿತ ಹೇಳಿಕೆಗಳನ್ನು ನೀಡಿ ಪಠ್ಯಪುಸ್ತಕದಲ್ಲಿರುವ ಲೋಪವನ್ನೆಲ್ಲ ಮರೆಮಾಚಲು ಹಾಗೂ 40% ಕಮಿಷನ್ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಹಣದಲ್ಲಿ ಆರ್ ಎಸ್ ಎಸ್ ಸಂಸ್ಥೆ ನಡೆಯುತ್ತಿದ್ದು, ಈ ಬಗ್ಗೆ ಆರ್ಎಸ್ಎಸ್ ರಾಜ್ಯ ಜನತೆಗೆ ಸ್ಪಷ್ಟನೆ ನೀಡಬೇಕು. ಈ ವೇಳೆ ಪ್ರತಿಭಟನಾಕಾರರು ಸರ್ಕಾರ ಹಾಗೂ ಆರ್ಎಸ್ಎಸ್ ಮತ್ತು ಬಿಜೆಪಿ ಶಾಸಕರು ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಪಕ್ಷದ ನಾಯಕರು ಚಡ್ಡಿ ಸಂಸ್ಕೃತಿ ವಿರುದ್ಧ ಧ್ವನಿ ಎತ್ತಿದರೆ ಬಿಜೆಪಿ ನಾಯಕರು ಅವರ ವಿರುದ್ಧ ಆಧಾರ ರಹಿತ ಟೀಕೆ ನಡೆಸುತ್ತಾರೆ. ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಅತ್ಯಂತ ಭ್ರಷ್ಟ ಪಕ್ಷ. ಭ್ರಷ್ಟಾಚಾರಿಗಳು ಪ್ರತಿಪಕ್ಷಗಳ ವಿರುದ್ಧ ಮಾತನಾಡುವ ನೈತಿಕತೆಯನ್ನು ಹೊಂದಿಲ್ಲ ಎಂದು ಮನೋಹರ್ ಹೇಳಿದರು. ಬಿಜೆಪಿ ಪಕ್ಷದ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಶಾಸಕರೇ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಾರೆ. ಜೊತೆಗೆ ಆರೋಗ್ಯ ಸಚಿವರು ಅಸಮರ್ಥ ನಾಯಕರೆಂದು ಅವರ ಪಕ್ಷದ ನಾಯಕರೇ ಹೇಳುತ್ತಾರೆ. ಇಷ್ಟೆಲ್ಲ ಟೀಕೆಗೆ ಗುರಿಯಾದರೂ ಅಧಿಕಾರದಲ್ಲಿರಲು ಬಿಜೆಪಿ ನಾಯಕರಿಗೆ ಹಾಗೂ ಮಂತ್ರಿಗಳಿಗೆ ಯಾವ ನೈತಿಕತೆಯಿದೆ? ಪ್ರತಿಪಕ್ಷವನ್ನು ಟೀಕಿಸಲು ಅವರಿಗೆ ಯಾವ ಯೋಗ್ಯತೆ ಇದೆ ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕು ಎಂದರು.