ಬೆಂಗಳೂರು: ಭಾರತ್ ಜೋಡೋ ಘೋಷಣೆ ನಂತರ ಬೂತ್ ಜೋಡೋ ಕಾರ್ಯ ಆಗಬೇಕಿದೆ. ಬೂತ್ ಗೆದ್ದರೆ ಭಾರತ ಗೆದ್ದಂತೆ ಎಂಬುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಯುವ ಕಾಂಗ್ರೆಸ್ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದೇ ಅರಮನೆ ಮೈದಾನದಲ್ಲಿ ರಾಜೀವ್ ಗಾಂಧಿ ಅವರು ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಆಗ ಕೆ.ಜೆ.ಜಾರ್ಜ್ ಯೂತ್ ಕಾಂಗ್ರೆಸ್ ಅಧ್ಯಕ್ಷರು, ನಾನು ಕಾರ್ಯದರ್ಶಿಯಾಗಿದ್ದೆ, ಗುಂಡೂರಾವ್ ಅವರು ಮುಖ್ಯಮಂತ್ರಿಗಳಾಗಿದ್ದರು.
ಇಂದಿರಾಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಕರ್ನಾಟಕ:ಇಂದಿರಾಗಾಂಧಿ ಅವರಿಗೆ ಅಂದು ರಾಜಕೀಯ ಪುನರ್ಜನ್ಮ ನೀಡಿದ ರಾಜ್ಯ ಕರ್ನಾಟಕ. 1999 ರಲ್ಲಿ ಬಳ್ಳಾರಿಯಿಂದ ಸೋನಿಯಾ ಗಾಂಧಿ ಅವರನ್ನು ಆಯ್ಕೆ ಮಾಡಿದ್ದು ಇದೇ ಕನ್ನಡಿಗರು. ರಾಹುಲ್ ಗಾಂಧಿ ಅವರು 23 ದಿನ ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ಮಾಡಿದರು. ಸೋನಿಯಾಗಾಂಧಿ ಅವರು ಕೂಡ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು ಎಂಬ ಮಾಹಿತಿ ನೀಡಿದರು.
ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ದೇಶ ದಿವಾಳಿ:ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು. ಕರ್ನಾಟಕದ ನೆಲ ಕಾಂಗ್ರೆಸ್ ಪಕ್ಷಕ್ಕೆ ನೂರಾರು ನಾಯಕರನ್ನು ಕೊಡುಗೆಯಾಗಿ ನೀಡಿದೆ. ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಈ ದೇಶವನ್ನು ದಿವಾಳಿ ಮಾಡುತ್ತಿದೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಕೊಡುಗೆಯನ್ನು ಮರೆಯುವಂತಿಲ್ಲ. ಸಾಕಷ್ಟು ಶ್ರಮವಹಿಸಿ ಪಕ್ಷವನ್ನು ತಳಮಟ್ಟದಲ್ಲಿ ಕಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು. ಪಕ್ಷಕ್ಕೆ ಯಾವುದೇ ಹೊರೆ ಹಾಕದೇ ಪಕ್ಷದ ಗೆಲುವಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಡೀ ದೇಶದ ಕಣ್ಣು ಕರ್ನಾಟಕದ ಮೇಲಿದೆ. ಪಿತೂರಿ ಮಾಡಿ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಇಳಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.