ಬೆಂಗಳೂರು:ಪತ್ರ್ಯೇಕ ಬಸ್ ಪಥ ಹಾಗೂ ಬಿಎಂಟಿಸಿ ಬಸ್ ಬಳಕೆ ಉತ್ತೇಜಿಸಲು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ನೇತೃತ್ವದಲ್ಲಿ ಇಂದು ವಿಶೇಷ ಅಭಿಯಾನ ನಡೆಸಲಾಯಿತು.
ಬಿಎಂಟಿಸಿಯಿಂದ 'ನಿಮ್ಮ ಬಸ್ ಸೂಪರ್ ಎಕ್ಸ್ ಪ್ರೆಸ್' ಅಭಿಯಾನ.. ಮಾರತ್ತಹಳ್ಳಿಯಿಂದ ಸಿಲ್ಕ್ ಬೋರ್ಡ್ವರೆಗೆ ನಿಮ್ಮ ಬಸ್ ಸೂಪರ್ ಎಕ್ಸ್‌ಪ್ರೆಸ್ ಅಭಿಯಾನ ನಡೆಸಿ ಸಾರ್ವಜನಿಕರು ಹೆಚ್ಚು ಬಿಎಂಟಿಸಿ ಬಸ್‌ಗಳನ್ನೇ ಉಪಯೋಗಿಸುವಂತೆ ಅರಿವು ಮೂಡಿಸಲಾಯಿತು.ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಬಿಎಂಟಿಸಿ ಎಂಡಿ ಸಿ. ಶಿಖಾ, ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಬಸ್ ಪಥದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ನಂತರ ಮಾತನಾಡಿದ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಜನ ಬಿಎಂಟಿಸಿ ಬಸ್‌ಗಳನ್ನು ಹೆಚ್ಚು ಹೆಚ್ಚು ಉಪಯೋಗಿಸುವುದರಿಂದ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಇದರಿಂದ ಪರಿಸರ ಮಾಲಿನ್ಯವನ್ನೂ ತಡೆಗಟ್ಟಬಹುದು. ಅಲ್ಲದೇ ಸಮಯವೂ ಉಳಿತಾಯವಾಗುತ್ತದೆ. ಈ ಮೊದಲು ಕೆಆರ್‌ಪುರಂನಿಂದ ಸಿಲ್ಕ್ ಬೋರ್ಡ್‌ಗೆ 1ಗಂಟೆ 30 ನಿಮಿಷ ಆಗುತ್ತಿತ್ತು. ಬಸ್ ಲೇನ್ ಆದ ನಂತರ 1 ಗಂಟೆ 12 ನಿಮಿಷ ಆಗುತ್ತಿದೆ. ಪ್ರಯಾಣದ ಅವಧಿ ಈಗಾಗಲೇ 18 ನಿಮಿಷ ಕಡಿಮೆ ಆಗಿದೆ. ಇದು ಯಶಸ್ವಿಯಾದ್ರೆ ಟ್ರಾಫಿಕ್ ಮತ್ತು ಮಾಲಿನ್ಯ ಕಡಿಮೆ ಆಗುತ್ತದೆ ಎಂದರು.
ಬಸ್ ಲೇನ್ ವ್ಯವಸ್ಥೆ ಹಾಗೂ ಬಿಎಂಟಿಸಿ ಬಸ್ ಬಳಕೆಯಿಂದ ಪರಿಸರ ಮಾಲಿನ್ಯ ಸೇರಿ ಸಮಯವನ್ನೂ ಉಳಿಸಬಹುದಾಗಿದೆ. ಪ್ರತಿಯೊಬ್ಬರು ಕೂಡಾ ಇದನ್ನು ಅನುಸರಿಸಬೇಕಿದೆ.