ಕರ್ನಾಟಕ

karnataka

ETV Bharat / state

ಕೆಲಸ ಕೊಟ್ಟ ಮಾಲೀಕನ ಖಾತೆಯಲ್ಲಿದ್ದ ಹಣ ಮಂಗಮಾಯ; ಕೈಚಳಕದ ಹಿಂದಿದೆ ಸಹೋದರಿಯರ ಪ್ರೇಮ್ ಕಹಾನಿ - ಕೈಚಳಕದ ಹಿಂದೆ ಸಹೋದರಿಯರ ಪ್ರೇಮ್ ಕಹಾನಿ

ಯುವತಿಯೊಬ್ಬಳು ಮಾಲೀಕನ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು ಕಂಪನಿಯ ಹಣವನ್ನು ತನ್ನ ಪ್ರಿಯತಮ ಹಾಗೂ ಸಹೋದರಿಯರ ಖಾತೆಗೆ ವರ್ಗಾಯಿಸಿ ಜೈಲು ಸೇರಿರುವ ಘಟನೆ ನಡೆದಿದೆ.

young-woman-misused-owners-money-got-caught
ಕೆಲಸ ಕೊಟ್ಟ ಮಾಲೀಕನ ಖಾತೆಯಲ್ಲಿದ್ದ ಹಣ ಮಂಗಮಾಯ; ಕೈಚಳಕದ ಹಿಂದೆ ಸಹೋದರಿಯರ ಪ್ರೇಮ್ ಕಹಾನಿ

By

Published : May 18, 2023, 4:10 PM IST

ಬೆಂಗಳೂರು:ಕೆಲಸ ಕೊಟ್ಟ ಮಾಲೀಕನ ಬ್ಯಾಂಕ್ ಖಾತೆಯಿಂದ ತನ್ನ ಪ್ರಿಯತಮ, ಹಾಗೂ ಸಹೋದರಿಯರ ಖಾತೆಗೆ ಹಣ ವರ್ಗಾಯಿಸಿದ್ದ ಯುವತಿ ಸಹಿತ ನಾಲ್ವರು ಆರೋಪಿಗಳನ್ನ ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ರೀತು, ನಕ್ಷು ಕುಶಾಲಪ್ಪ, ಗಾಯನ ಹಾಗೂ ಜಾನು ಬಂಧಿತ ಆರೋಪಿಗಳು.

ಪ್ರಕರಣದ ಹಿನ್ನೆಲೆ:ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿ ನಡೆಸುತ್ತಿರುವ ವೆಂಕಟೇಶ ರೆಡ್ಡಿ ಎಂಬುವರು ತಮ್ಮ ಕಂಪನಿಯ ರಿಸೆಪ್ಶನಿಸ್ಟ್ ಹುದ್ದೆಗೆ ಆರೋಪಿ ರೀತುಳನ್ನ ನೇಮಕಗೊಳಿಸಿದ್ದರು. ಕಂಪನಿಗೆ ಸಂಬಂಧಿಸಿದ ವ್ಯವಹಾರದ ಫೋನ್ ಪೇ, ಗೂಗಲ್ ಪೇಗಳ ನಿರ್ವಹಣೆಯ ಹೊಣೆಯನ್ನ ರೀತುಗೆ ನೀಡಲಾಗಿತ್ತು. ಮಾಲೀಕನ ನಂಬಿಕೆಯನ್ನ ದುರ್ಬಳಕೆ ಮಾಡಿಕೊಂಡಿದ್ದ ರೀತು ತನ್ನ ಹಾಗೂ ತನ್ನ ಸಹೋದರಿಯರ ಪ್ರೇಮ್ ಕಹಾನಿಗಳಿಗೆ ಕಂಪನಿಯ ಹಣವನ್ನ ಬಳಸಿಕೊಳ್ಳಲಾರಂಭಿಸಿದ್ದಳು. ಬರೋಬ್ಬರಿ 2.70 ಲಕ್ಷ ರೂ. ಹಣವನ್ನು ತನ್ನ ಪ್ರಿಯತಮ ಹಾಗೂ ಸಹೋದರಿಯರ ಖಾತೆಗಳಿಗೆ ವರ್ಗಾಯಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ದಿನದ ನಂತರ ಖಾತೆಯಲ್ಲಿ ಹಣ ಖಾಲಿಯಾಗಿರುವುದನ್ನು ಗಮನಿಸಿದ್ದ ವೆಂಕಟೇಶ್ ರೆಡ್ಡಿ, ಅನುಮಾನಗೊಂಡು ಪರಿಶೀಲಿಸಿದಾಗ ವಿವಿಧ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿತ್ತು. ಘಟನೆ ಸಂಬಂಧ ವೆಂಕಟೇಶ್ ರೆಡ್ಡಿ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಹೋದರಿಯರ ಸಹಿತ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

ಹಾಡಹಗಲೇ ಡ್ರ್ಯಾಗರ್​ ತೋರಿಸಿ ಮೊಬೈಲ್​ ಕಸಿಯಲು ಯತ್ನ: ರಸ್ತೆಯಲ್ಲಿ ಡ್ರ್ಯಾಗರ್ ಹಿಡಿದು ಬಂದ ಕಿಡಿಗೇಡಿಯೊಬ್ಬ ಯುವತಿಗೆ ಕಿರುಕುಳ ನೀಡಿರುವ ಘಟನೆ ಪುಲಿಕೇಶಿ ನಗರ ವ್ಯಾಪ್ತಿಯ ವಿವೇಕಾನಂದ ರೆಸಿಡೆನ್ಸಿ ಬಳಿ ಮೇ 15ರಂದು ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಿರುಕುಳಕ್ಕೊಳಗಾಗಿದ್ದ ಯುವತಿಯ ರಕ್ಷಣೆಗೆ ಮತ್ತೊಬ್ಬ ಮಹಿಳೆ ಧಾವಿಸಿದ ಬಳಿಕ ಪುಂಡ ಪರಾರಿಯಾಗಿದ್ದಾನೆ.

ಡ್ರ್ಯಾಗರ್ ಹಿಡಿದು ಬಂದ ಆರೋಪಿ ಯುವತಿಯ ಮೊಬೈಲ್ ಕಸಿಯುವ ಪ್ರಯತ್ನ ಮಾಡಿದ್ದಾನೆ. ಆಕೆಯನ್ನು ಬೆನ್ನಟ್ಟುತ್ತ ಬಂದು ಅಡ್ಡಗಟ್ಟಿ ಕಿರುಕುಳ ನೀಡುತ್ತಿದ್ದಂತೆ, ಯುವತಿ ರಕ್ಷಣೆಗೆ ಮತ್ತೊಬ್ಬ ಮಹಿಳೆ ಧಾವಿಸಿದ್ದಾರೆ. ತಕ್ಷಣ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಪುಲಿಕೇಶಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಉದ್ಯಮಿ ಮೇಲೆ ಹಲ್ಲೆ: ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾರು ವ್ಯವಹಾರ ಮಾಡುವ ಉದ್ಯಮಿ ಮೇಲೆ ಮಹಿಳೆ ಹಾಗೂ ಇಬ್ಬರು ಸಂಬಂಧಿಕರು ಸೇರಿ ಹಲ್ಲೆ ನಡೆಸಿರುವ ಘಟನೆ ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿ ಇತ್ತೀಚೆಗೆ ನಡೆದಿತ್ತು. ಹಲ್ಲೆ ನಡೆಸಿದ ರೋನಿತ್, ದುರ್ಗಾ ಮತ್ತು ಅವರ ಸಹೋದರ ಹಾಗೂ ಇತರ ಆರೋಪಿಗಳ ವಿರುದ್ಧ ಶಂಕರ ನಗರದ ನಿವಾಸಿ ಉದ್ಯಮಿ ಅಖಿಲ್ ಅಲಿಯಾಸ್ ಹೇಮಾದ್ರಿ ಯಾದವ್ ಎಂಬುವವರು ಕೊಡಿಗೇಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಪೆಟ್ರೋಲ್​ ಬಂಕ್​ ಮಾಲೀಕನಿಗೆ 15 ಬಾರಿ ಇರಿದು ಕೊಂದು, ಹಣ ದರೋಡೆ; ಅರ್ಧಗಂಟೆಯಲ್ಲಿ ಆರೋಪಿಗಳು ಸೆರೆ

ABOUT THE AUTHOR

...view details