ಬೆಂಗಳೂರು : ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯ ಬಟ್ಟೆ ಎಳೆದಾಡಿ ಪುಂಡನೊಬ್ಬ ಕಿರುಕುಳ ನೀಡಿರುವ ಘಟನೆ ನವೆಂಬರ್ 6ರಂದು ಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಯನಗರದ ಸೌತ್ ಎಂಡ್ ಸರ್ಕಲ್ ಬಳಿಯಿರುವ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕಚೇರಿಯ ಮುಂಭಾಗದಲ್ಲಿಯೇ ಆರೋಪಿಯು ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ 26 ವರ್ಷದ ಯುವತಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರುದಾರ ಯುವತಿ ಕೂಡ್ಲು ಗೇಟ್ ಬಳಿ ಕೆಲಸ ಮಾಡುತ್ತಿದ್ದು, ನವೆಂಬರ್ 6ರಂದು ರಾತ್ರಿ 10.40ರ ಸುಮಾರಿಗೆ ಕೆಲಸ ಮುಗಿಸಿ ಕನಕಪುರ ಮುಖ್ಯ ರಸ್ತೆಯ ಕಡೆಯಿರುವ ಮನೆಗೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಳು. ಆ ಸಂದರ್ಭದಲ್ಲಿ ಯುವತಿಯನ್ನ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿ ಸೌತ್ ಎಂಡ್ ಸರ್ಕಲ್ ಬಳಿಯಿರುವ ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಮುಂಭಾಗದಲ್ಲಿ ಆಕೆಯ ಬಟ್ಟೆ ಎಳೆದಾಡಿ, ಅಶ್ಲೀಲವಾಗಿ ನಿಂದಿಸಿದ್ದಾನೆ. ನಂತರ ಕನಕಪುರ ಮುಖ್ಯ ರಸ್ತೆಯ ಸರ್ಕಲ್ ಬಳಿ ತನ್ನ ದ್ವಿಚಕ್ರ ವಾಹನ ಯೂಟರ್ನ್ ಮಾಡಿಕೊಂಡು ತೆರಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.