ಬೆಂಗಳೂರು :ಬಾತ್ ರೂಮ್ನಲ್ಲಿ ಬಿದ್ದು ಕೈಗೆ ಗಾಯವಾಗಿದ್ದ ಹಿನ್ನೆಲೆಯಲ್ಲಿ ಮುಂಗೈ ಶಸ್ತ್ರಚಿಕಿತ್ಸೆಗಾಗಿ ನಗರದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಚಿಕ್ಕಬಳ್ಳಾಪುರ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿನಿಮೃತಪಟ್ಟಿದ್ದಾಳೆ. ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯತನವೇ ತಮ್ಮ ಮಗಳ ಸಾವಿಗೆ ಕಾರಣ ಎಂದು ಮೃತ ವಿದ್ಯಾರ್ಥಿನಿ ತೇಜಸ್ವಿನಿ ಅವರ ಪೋಷಕರು ಆರೋಪಿಸಿದ್ದಾರೆ.
ಮೃತ ಯುವತಿ ಮೂಲತಃ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನವಳು. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ತೇಜಸ್ವಿನಿ ಪಿಜಿಯೊಂದರಲ್ಲಿ ಉಳಿದುಕೊಂಡಿದ್ದಳು. ಬಾತ್ ರೂಮ್ನಲ್ಲಿ ಬಿದ್ದ ಕಾರಣ ಕೈ ಸರ್ಜರಿ ಮಾಡಿಸಿಕೊಳ್ಳಲು ಭಾನುವಾರ ಮಾರತ್ಹಳ್ಳಿಯ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಆದರೆ, ಶಸ್ತ್ರಚಿಕಿತ್ಸೆ ನಡೆದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ಮಗಳು ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ಕುಟುಂಬದವರೊಡನೆ ಆಸ್ಪತ್ರೆಗೆ ದಾಖಲಿಸಲಾಗಿದ್ದ ಯುವತಿ ಮಧ್ಯಾಹ್ನ 12ಕ್ಕೆ ಸರ್ಜರಿಗೆ ತೆರಳಿದ್ದಳು. ಬಳಿಕ ಸಂಜೆ 4 ಗಂಟೆಗೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗ್ತಿದೆ.
ಸರ್ಜರಿ ವೇಳೆ ಹೃದಯಾಘಾತ ಉಂಟಾಗಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ ಅಂತಾ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಅನಸ್ತೇಷಿಯಾ ನೀಡಿದ್ದ ಡಾ. ಶಶಾಂಕ್, ಡಾ.ಅಶೋಕ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. ಹೆಚ್ಎಎಲ್ ಪೊಲೀಸರು ಡಾ. ಶಶಾಂಕ್ರನ್ನು ವಿಚಾರಣೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ಮತ್ತೊಂದು ಅಮಾನವೀಯ ಘಟನೆ.. ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ಕೊಂದ ಕಿಡಿಗೇಡಿ..