ಬೆಂಗಳೂರು: ಸಾಕಿ ಸಲಹಿದ ಮಗಳು ವಿದ್ಯಾವಂತೆಯಾಗಲಿ, ಲೋಕಜ್ಞಾನ ತಿಳಿದುಕೊಳ್ಳಲಿ ಎಂದು ಕಾಲೇಜಿಗೆ ಕಳಿಸಿದರೆ, ಮಗಳು ಹದಿಹರೆಯದಲ್ಲೇ ಪ್ರೀತಿಯ ಗೀಳಿಗೆ ಬಿದ್ದು ಕೊನೆಗೆ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಆರ್ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜೆಮಿನಿ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಗಳ ಹಠಕ್ಕೆ ಬೇಸತ್ತ ತಾಯಿ ಶಶಿಕಲಾ 2 ತಿಂಗಳ ಹಿಂದೆ ನೇಣಿಗೆ ಶರಣಾಗಿದ್ದರು. ಈಗ ಮಗಳು ಜೆಮಿನಿಯೂ ಅದೇ ಹಾದಿ ಹಿಡಿದಿದ್ದು ಸಾಕಿ ಸಲಹಿದ ತಂದೆಯನ್ನು ಒಂಟಿಯಾಗಿಸಿ ಹೋಗಿದ್ದಾಳೆ.
ಏನಿದು ಘಟನೆ ? ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಜೆಮಿನಿ, ಭರತ್ ಎಂಬಾತನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಪೋಷಕರ ಮಾತನ್ನೂ ಧಿಕ್ಕರಿಸಿ ಭರತ್ನನ್ನು ಪ್ರೀತಿಸುತ್ತಿದ್ದಳು. ಜೆಮಿನಿಗೆ ಎಷ್ಟು ಬುದ್ಧಿವಾದ ಹೇಳಿದ್ದರೂ ಪೋಷಕರ ಮಾತಿಗೆ ಮನ್ನಣೆಯಿರಲಿಲ್ಲ. ಕೊನೆಗೆ ಭರತ್ನ ಜೊತೆಗೆ ಮದುವೆ ಮಾತುಕತೆ ಮಾಡೋಣವೆಂದು ನೋಡಿದರೆ ಆತ ಗಾಂಜಾ ವ್ಯಸನಿಯಾಗಿದ್ದನಂತೆ. ಏನೇ ಆಗಲಿ ಆತನೇ ಬೇಕು ಎಂದು ಹಠಕ್ಕೆ ಬಿದ್ದಿದ್ದ ಮಗಳ ನಿಲುವಿಗೆ ಬೇಸತ್ತ ತಾಯಿ ಶಶಿಕಲಾ 2 ತಿಂಗಳ ಹಿಂದೆ ನೇಣಿಗೆ ಶರಣಾಗಿದ್ದರು. ಇಷ್ಟಾದರೂ ಸಹ ಭರತ್ ಮತ್ತು ಜೆಮಿನಿಯ ಪ್ರೀತಿ ನಿಂತಿರಲಿಲ್ಲ.
ಓದಿ:ಸಂಪುಟ ವಿಸ್ತರಣೆ, ಉಪ ಚುನಾವಣಾ ಅಭ್ಯರ್ಥಿ ಆಯ್ಕೆ ಕುರಿತು ವರಿಷ್ಠರ ಜೊತೆ ಚರ್ಚೆ: ಸಿಎಂ
ಜ.1 ರಂದು ಧರ್ಮಸ್ಥಳಕ್ಕೆ ತೆರಳಿದ್ದ ಜೆಮಿನಿಯ ತಂದೆ ನಾಗರಾಜ್ಗೆ ಕರೆ ಮಾಡಿದ್ದ ಭರತ್, ನಿಮ್ಮ ಮಗಳಿಗೆ ವಿಶ್ ಮಾಡಬೇಕು ಫೋನ್ ಕೊಡಿ ಎಂದು ಒತ್ತಾಯಿಸಿದ್ದ. ತಾವು ಊರಿನಲ್ಲಿಲ್ಲ ಎಂದಿದ್ದ ನಾಗರಾಜ್ ಭರತ್ಗೆ ಬುದ್ಧಿವಾದ ಹೇಳಿದ್ದರು. ಆದರೆ ಅದಾಗಿ ನಾಲ್ಕೇ ದಿನದಲ್ಲಿ ಜೆಮಿನಿ ಸಹ ನೇಣಿಗೆ ಶರಣಾಗಿದ್ದಾಳೆ. ಇದ್ದೊಬ್ಬ ಮಗಳನ್ನು ಕಳೆದುಕೊಂಡ ನಾಗರಾಜ್ ಒಂಟಿಯಾಗಿದ್ದು, ಮಗಳಿಗೆ ಪ್ರೀತಿಯ ಹುಚ್ಚು ಹಿಡಿಸಿ ಆಕೆಯ ಸಾವಿಗೆ ಕಾರಣವಾದ ಭರತ್ ವಿರುದ್ಧ ಆರ್ಎಂಸಿ ಯಾರ್ಡ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಭರತ್ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.