ಬೆಂಗಳೂರು:ಯುವಜನತೆಯ ಅಪಾರ ಶಕ್ತಿಯನ್ನು ಸಾಮಾಜಿಕ ಕಲ್ಯಾಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಬಳಸುವುದು ಅಗತ್ಯವಾಗಿದ್ದು, ಸ್ವಾಮಿ ವಿವೇಕಾನಂದರ ಆಶಯದಂತೆ ಸಮಾಜದಲ್ಲಿ ಉತ್ತಮ ಬದಲಾವಣೆ ತರುವ ಸಾಮರ್ಥ್ಯವಿರುವಂತಹ ಯುವಜನರಲ್ಲಿ ಸಕರಾತ್ಮಕ ಶಕ್ತಿ ಮತ್ತು ಉತ್ಸಾಹವನ್ನು ತುಂಬುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಜಯನಗರದಲ್ಲಿ ಯುವ ಸಂಘದ ಯುವ ಪಥ ಅಮೃತಮಹೋತ್ಸವ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಯುವಜನತೆ ದೇಶದ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಯ ಪ್ರಮುಖ ಭಾಗವಾಗಿದ್ದಾರೆ."ರಾಷ್ಟ್ರೀಯ ಯುವ ನೀತಿ -2014" ಅನ್ನು ಭಾರತ ಸರ್ಕಾರವು ಜಾರಿಗೆ ತಂದಿದೆ, ಇದರ ಉದ್ದೇಶ 'ಯುವಕರ ಸಾಮರ್ಥ್ಯವನ್ನು ಗುರುತಿಸುವುದು ಮತ್ತು ಸಬಲೀಕರಣಗೊಳಿಸುವುದು ಮತ್ತು ಈ ಮೂಲಕ ಭಾರತಕ್ಕೆ ವಿಶ್ವದಲ್ಲಿ ಸರಿಯಾದ ಸ್ಥಾನವನ್ನು ನೀಡುವುದು' ಎಂದು ರಾಜ್ಯಪಾಲರು ಮಾಹಿತಿ ನೀಡಿದರು.
ಭಾರತ ಯುವಕರ ದೇಶ. ದೇಶದ ಅಭಿವೃದ್ಧಿಗೆ ಯುವಕರು ಸಕ್ರಿಯವಾಗಿ ಕೊಡುಗೆ ನೀಡುವ ನಿರೀಕ್ಷೆಯಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಯುವಜನರಿಗೆ ನಿರ್ದೇಶನ ನೀಡುವ ಮತ್ತು ಸಮಾಜಕ್ಕಾಗಿ ಏನಾದರೂ ಮಾಡುವ ಉದ್ದೇಶದಿಂದ 1944ರಲ್ಲಿ ಈ ಸಂಸ್ಥೆಯು ಪತ್ರಿಕೆ ಓದುವ ಕೇಂದ್ರವಾಗಿ ಆರಂಭವಾಯಿತು. ಈ ಸ್ವಯಂಸೇವಾ ಸಂಸ್ಥೆಯು ತನ್ನ ಸ್ಥಾಪನೆಯ 75 ವರ್ಷಗಳಿಗಿಂತಲೂ ಹೆಚ್ಚು ಕಾಲ ಯುವಕರ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ದೇಶದ ಆಸಕ್ತಿಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.