ಕರ್ನಾಟಕ

karnataka

By

Published : Feb 21, 2023, 2:07 PM IST

ETV Bharat / state

ಪ್ರಿಯಕರನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದ ಪಾಕ್ ಯುವತಿ ಸ್ವದೇಶಕ್ಕೆ ಹಸ್ತಾಂತರ

ಅಕ್ರಮವಾಗಿ ಪ್ರಿಯಕರನೊಂದಿಗೆ ಭಾರತ ಪ್ರವೇಶಿಸಿ ಭಾರತೀಯ ಪ್ರಜೆಯಾಗಲು ಪ್ರಯತ್ನಿಸಿದ್ದ ಪಾಕಿಸ್ತಾನಿ ಪ್ರಜೆ ಇಕ್ರಾಳನ್ನು ಪೊಲೀಸರು ಪಾಕ್​ಗೆ ಹಸ್ತಾಂತರಿಸಿದ್ದಾರೆ.

Young Pakistani woman living in Bangalore
ಪ್ರಿಯಕರನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದ ಪಾಕ್ ಯುವತಿ ಹಸ್ತಾಂತರ

ಬೆಂಗಳೂರು:ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮೂಲದ ಯುವತಿಯನ್ನು ಗಡಿಪಾರು ಮಾಡಿ ಪಾಕ್‌ ಅಧಿಕಾರಿಗಳಿಗೆ ಪೊಲೀಸರು ಒಪ್ಪಿಸಿದ್ದಾರೆ. ನಗರದ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಪ್ರಿಯಕರನೊಂದಿಗೆ ನೆಲೆಸಿದ್ದ ಇಕ್ರಾ ಜೀವನಿಯನ್ನು ಕಳೆದ ತಿಂಗಳು ಪೊಲೀಸರು ವಶಕ್ಕೆ ಪಡೆದಿದ್ದರು. ಜನವರಿ 19 ರಂದು ಉತ್ತರ ಪ್ರದೇಶದ ಮುಲಾಯಂ ಸಿಂಗ್ ಜೊತೆ ಬೆಂಗಳೂರಿಗೆ ಬಂದಿದ್ದ ಇಕ್ರಾಳನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ ಸುಪರ್ದಿಗೆ ಒಪ್ಪಿಸಲಾಗಿತ್ತು.

ವಾಘಾ ಅಟ್ಟಾರಿ ಗಡಿಯಲ್ಲಿ ಪಾಕ್​ ಅಧಿಕಾರಿಗಳಿಗೆ ಹಸ್ತಾಂತರ.. ಇಕ್ರಾ ಪಾಕ್‌ ಪ್ರಜೆ ಎಂಬುದು ಸಾಬೀತಾದ ಹಿನ್ನೆಲೆ ವಿದೇಶಾಂಗ ಇಲಾಖೆಯ ಸಹಾಯದೊಂದಿಗೆ ಬೆಳ್ಳಂದೂರು ಪೊಲೀಸರು ವಾಘಾ – ಅಟ್ಟಾರಿ ಗಡಿಯಲ್ಲಿ ಭಾನುವಾರ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಗಳಿಗೆ ಆಕೆಯನ್ನು ಒಪ್ಪಿಸಿದ್ದಾರೆ. ತವರು ದೇಶಕ್ಕೆ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಇಕ್ರಾ ತನ್ನನ್ನು ಪಾಕಿಸ್ತಾನಕ್ಕೆ ಕಳುಹಿಸದಂತೆ ಅಂಗಲಾಚಿದ ಪ್ರಸಂಗ ನಡೆದಿದೆ. ಆದರೆ ಆಕೆಯ ಮನವೊಲಿಸಿ ವಾಪಸ್ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೂಡೋ ಗೇಮ್​ ಮೂಲಕ ಇಬ್ಬರಿಗೂ ಪರಿಚಯ: ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಉತ್ತರ ಪ್ರದೇಶ ಮೂಲದ ಮುಲಾಯಂ ಸಿಂಗ್​ಗೆ ಆನ್‌ಲೈನ್‌ನಲ್ಲಿ ಲೂಡೋ ಗೇಮ್ ಆಡುವಾಗ ಪಾಕ್‌ ಮೂಲದ ಇಕ್ರಾಳ ಪರಿಚಯ ಆಗಿತ್ತು. ಈ ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರೂ ಮದುವೆ ನಿರ್ಧಾರಕ್ಕೆ ಬಂದಿದ್ದರು. ಗೆಳತಿ ಪಾಕಿಸ್ತಾನದಲ್ಲಿದ್ದ ಕಾರಣ ನೇರವಾಗಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದ ಮುಲಾಯಂ ಸಿಂಗ್ ಕರಾಚಿಯಿಂದ ದುಬೈಗೆ, ದುಬೈಯಿಂದ ನೇಪಾಳದ ಕಠ್ಮಂಡುಗೆ ಇಕ್ರಾಳನ್ನು ಕರೆಸಿಕೊಂಡು ಬಳಿಕ ನೇಪಾಳದಲ್ಲಿ ಇಬ್ಬರು ಮದುವೆಯಾಗಿದ್ದರು.

ಬಿಹಾರ ಮೂಲಕ ಭಾರತ ಪ್ರವೇಶಿಸಿದ್ದ ಜೋಡಿ: ಬಳಿಕ ಕಳೆದ ಸೆಪ್ಟೆಂಬರ್‌ನಲ್ಲಿ ಬಿಹಾರ ಮೂಲಕ ಭಾರತದ ಗಡಿ ಪ್ರವೇಶಿಸಿ ಪಾಟ್ನಾಗೆ ಬಂದಿದ್ದರು. ಬಳಿಕ ರೈಲಿನಲ್ಲಿ ಬೆಂಗಳೂರಿಗೆ ಬಂದು ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದರು. ಪಾಕಿಸ್ತಾನದಲ್ಲಿರುವ ತಾಯಿ ಜೊತೆ ಮಾತನಾಡಲು ಇಕ್ರಾ ಕರೆ ಮಾಡುತ್ತಿದ್ದಳು. ಈ ವಿಷಯ ತಿಳಿದ ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಪೊಲೀಸರಿಗೆ ಮಾಹಿತಿ ರವಾನಿಸಿತ್ತು. ಅದರ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಮುಲಾಯಂ ಸಿಂಗ್ ನನ್ನು ಬಂಧಿಸಿ ಇಕ್ರಾಳನ್ನು ಎಫ್‌ಆರ್‌ಆರ್‌ಒ ಗೆ ಒಪ್ಪಿಸಿದ್ದರು.

ನಕಲಿ ಆಧಾರ್​ ಪಡೆದು ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಇಕ್ರಾ: ಸದ್ಯ ಇಕ್ರಾಳನ್ನ ಅಕ್ರಮವಾಗಿ ಗಡಿ ದಾಟಿಸಿ ತಂದ ತಪ್ಪಿಗೆ ಮುಲಾಯಂ ಸಿಂಗ್ ನನ್ನು ವಿದೇಶಿ ಕಾಯ್ದೆಯಡಿ ದೇಶದ ಭದ್ರತೆಗೆ ಅಪಾಯ ತಂದ ಆರೋಪದಡಿ ಜೈಲಿಗೆ ಕಳುಹಿಸಲಾಗಿದೆ. ತನಿಖೆಯ ವೇಳೆ ಈಕೆ ರವಾ ಯಾದವ್‌ ಹೆಸರಿನಲ್ಲಿ ನಕಲಿ ಆಧಾರ್‌ ಕಾರ್ಡ್‌ ಪಡೆದಿರುವುದು ಹಾಗೂ ಅದೇ ಹೆಸರಿನಲ್ಲಿ ಪಾಸ್‌ಪೋರ್ಟ್‌ ಪಡೆಯಲು ಅರ್ಜಿ ಸಲ್ಲಿಸಿದ್ದ ವಿಚಾರ ಸಹ ತನಿಖೆ ವೇಳೆ ಬಯಲಾಗಿತ್ತು.

ಇದನ್ನೂ ಓದಿ:ಆಗ್ರಾದಲ್ಲಿ ಅಕ್ರಮವಾಗಿ ನೆಲೆಸಿದ್ದ 40 ಬಾಂಗ್ಲಾದೇಶಿಗರನ್ನು ಬಂಧಿಸಿದ ಪೊಲೀಸರು

ABOUT THE AUTHOR

...view details