ಆನೇಕಲ್ (ಬೆಂಗಳೂರು) : ಈವರೆಗೆ ಬೈಕ್ನಲ್ಲಿ ಬಂದು ಒಂಟಿ ಮಹಿಳೆಯರ ಚಿನ್ನದ ಸರ ಕಳವು ಮಾಡುತ್ತಿದ್ದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಆದರೇ, ಇದನ್ನೂ ಮೀರಿಸುವ ಸರಗಳ್ಳತನ ಪ್ರಕರಣವೊಂದು ರಾಜಧಾನಿ ಬೆಂಗಳೂರಿನಲ್ಲಿ ಸದ್ದು ಮಾಡಿದೆ. ಕಾಲಿನ ನೋವಿಗೆ ಮಂತ್ರ ಹಾಕಿಸಿಕೊಳ್ಳುವ ನೆಪದಲ್ಲಿ ಬಂದಿದ್ದ ಯುವಕನೊಬ್ಬ ವೃದ್ದೆಯ ಕತ್ತುಕೊಯ್ದು ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಆನೇಕಲ್ ಪಟ್ಟಣದ ಲಕ್ಷ್ಮಿ ಟಾಕೀಸ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನಡೆದಿದೆ.
ಘಟನೆಯಲ್ಲಿ ಅಕ್ಕಯ್ಯಮ್ಮ ಎಂಬ ವೃದ್ದೆಯ ಕತ್ತಿಗೆ ಹಾಗೂ ವೃದ್ದೆಯ ಗಂಡ ನಾರಾಯಣಾಚಾರಿ ಅವರಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವೃದ್ದೆ ಅಕ್ಕಯ್ಯಮ್ಮ ಹಾಗೂ ಪತಿ ನಾರಾಯಾಣಾಚಾರಿ ಇಬ್ಬರೂ ಕಾಲು, ಕೈ ಉಳುಕಿದ್ದರೇ, ಮಂತ್ರ ಹಾಕುತ್ತಿದ್ದರು. ಹೀಗಾಗಿ ಮಂತ್ರ ಹಾಕಿಸಿಕೊಳ್ಳುವ ನೆಪದಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ದುಷ್ಕರ್ಮಿ ವೃದ್ದೆ ಕತ್ತನ್ನು ಕುಡಗೋಲಿನಿಂದ ಕೊಯ್ದು ಚಿನ್ನದ ಸರ ಎಗರಿಸಿದ್ದಾನೆ.
ಕಳೆದ ಶನಿವಾರವೂ ಮಂತ್ರ ಹಾಕಿಸಿಕೊಳ್ಳಲು ಬಂದಿದ್ದ ಆರೋಪಿ ಮನೆಯಲ್ಲಿ ಇಬ್ಬರೇ ವೃದ್ದರು ಇರುವುದನ್ನು ಖಾತರಿಪಡಿಸಿಕೊಂಡು ಹೊಂಚು ಹಾಕಿದ್ದನು. ಇಂದು ಬೆಳಗ್ಗೆ ನಡೆದುಕೊಂಡೇ ಬಂದು ಹಳೆ ಪರಿಚಯದಿಂದಲೇ ಮನೆಗೆ ನುಗ್ಗಿ ಕೃತ್ಯ ಎಸಗಿ ಲಕ್ಷ್ಮಿ ಟಾಕೀಸ್ ಕಡೆಗೆ ಓಡಿ ಹೋಗಿದ್ದಾನೆ. ಈ ಸಂದರ್ಭದಲ್ಲಿ ಚೀರಾಟ ಕೇಳಿದ ಅಕ್ಕ ಪಕ್ಕದ ಮನೆಯವರು ಘಟನೆ ನಡೆದ ಸ್ಥಳಕ್ಕೆ ಬಂದಿದ್ದಾರೆ. ಬಳಿಕ ವೃದ್ದ ದಂಪತಿಯ ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.