ಬೆಂಗಳೂರು:ಪ್ರಿಯಕರನೇ ಯುವತಿಗೆ ಬೆಂಕಿ ಹಚ್ಚಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಬೆಳಕಿಗೆ ಬಂದಿದೆ. ಬಾದಾಮಿ ಮೂಲದ ಶಿವಕುಮಾರ್ ಎಂಬಾತನೇ ದಾನೇಶ್ವರಿ ಎಂಬ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.
ಯುವತಿ ದಾನೇಶ್ವರಿ ಮತ್ತು ಶಿವಕುಮಾರ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಮದುವೆಯ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದ್ದು, ಕೊಲೆಯಲ್ಲಿ ಅಂತ್ಯ ಕಂಡಿದೆ ಎನ್ನಲಾಗಿದೆ. ವೀರಸಂದ್ರದ ಕಂಪನಿಯೊಂದರಲ್ಲಿ ಶಿವಕುಮಾರ್ ಕೆಲಸ ಮಾಡುತ್ತಿದ್ದು, ಅಲ್ಲಿಗೆ ದಾನೇಶ್ವರಿ ಬಂದಿದ್ದಳು. ಆಗ ಇಬ್ಬರ ನಡುವೆ ಮದುವೆಯ ವಿಚಾರದಲ್ಲಿ ಕಂಪನಿ ಮುಂದೆಯೇ ಜಗಳ ನಡೆದಿದೆ. ಆ ಸಮಯದಲ್ಲಿ ಬಾಟಲ್ನಲ್ಲಿ ಪೆಟ್ರೋಲ್ ತಂದ ಯುವಕ, ದಾನೇಶ್ವರಿ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗುತ್ತಿದೆ.
ಬಳಿಕ ದಾನೇಶ್ವರಿಯನ್ನು ಶಿವಕುಮಾರ್ನೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ ಎನ್ನಲಾಗಿದ್ದು, ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರೇಯಸಿ ಹತ್ಯೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಮದುವೆ ಮಾಡಲು ಸಿದ್ಧತೆ ನಡೆದಿತ್ತು: ಘಟನೆ ಬಗ್ಗೆ ಮಾತನಾಡಿರುವ ಯುವತಿಯ ತಂದೆ ಅಶೋಕ್ ಶರ್ಮ, ನಾವು ಮಗಳ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾಗ ಅವಳು ತಾನು ಪ್ರೀತಿಸುವ ವಿಷಯವನ್ನು ತಿಳಿಸಿದ್ದಳು. ಶಿವಕುಮಾರ್ ಹಾಗೂ ದಾನೇಶ್ವರಿ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಪ್ರೀತಿಸಿದ್ದಾರೆ. ಶಿವಕುಮಾರ್ನನ್ನೇ ಮದುವೆಯಾಗುತ್ತೇನೆ, ಆದರೆ, ಆತ ಒಪ್ಪುತ್ತಿಲ್ಲ ಎಂದು ಅವಳು ತಮಗೆ ಹೇಳಿದ್ದಳು.