ಬೆಂಗಳೂರು: ಕುಡಿದ ನಶೆಯಲ್ಲಿ ಎರಡು ಗ್ಯಾಂಗ್ಗಳ ನಡುವೆ ಮಾರಾಮಾರಿ ನಡೆದಿದೆ. ಈ ಜಗಳದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿ ಯುವಕನೊಬ್ಬ ತನ್ನ ಎಡ ಮುಂಗೈ ಕಳೆದುಕೊಂಡಿದ್ದಾನೆ. ಇದಲ್ಲದೇ ಆ ಕಟ್ ಆಗಿದ್ದ ಕೈಯನ್ನು ಬೀದಿ ನಾಯಿ ತೆಗೆದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಹರೀಶ್ ಬಂಧಿತ ಆರೋಪಿ. ಹಲ್ಲೆಗೊಳಗಾಗಿರುವ ಪ್ರಜ್ವಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಿಬಿಎಂ ವ್ಯಾಸಂಗ ಮಾಡುತ್ತಿರುವ ಈತ ಕಳೆದ ತಿಂಗಳು 29ರಂದು ರಾತ್ರಿ ಸ್ನೇಹಿತ ಯೋಗೇಶ್ ಜೊತೆ ಸೇರಿ ಹಲವರೊಂದಿಗೆ ಕುರುಬರಹಳ್ಳಿಯ ಕದಂಬ ಬಾರ್ಗೆ ಹೋಗಿದ್ದನು. ಮದ್ಯ ಸೇವಿಸುತ್ತಿದ್ದಾಗ ಆರೋಪಿ ಹರೀಶ್ ಆತನ ಸ್ನೇಹಿತರು ಪಕ್ಕದ ಟೇಬಲ್ನಲ್ಲಿ ಪಾನಮತ್ತರಾಗಿದ್ದರು. ಹರೀಶ್ ಹಾಗೂ ಯೋಗೇಶ್ ಜೊತೆ ಹಳೆ ವೈಷ್ಯಮ್ಯಕ್ಕೆ ಎರಡು ಗುಂಪುಗಳ ನಡುವೆ ವಾದ- ವಿವಾದ ಏರ್ಪಟ್ಟಿದೆ. ಇದನ್ನು ಕಂಡ ಬಾರ್ ಮಾಲೀಕರು ಅಲ್ಲಿಂದ ಇವರನ್ನು ಹೊರ ಕಳುಹಿಸಿದ್ದಾರೆ.
ಮಧ್ಯರಾತ್ರಿ 12.30ರ ಸುಮಾರಿಗೆ ಪ್ರಜ್ವಲ್ ಹಾಗೂ ಆತನ ಸ್ನೇಹಿತರು ಅಂಗಡಿಯೊಂದರ ಬಳಿ ನಿಂತಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಹರೀಶ್ ಹಾಗೂ ಆತನ ಗ್ಯಾಂಗ್ ಮತ್ತೆ ತಗಾದೆ ತೆಗೆದು ಲಾಂಗ್ನಿಂದ ಪ್ರಜ್ವಲ್ ಮೇಲೆ ಬೀಸಿದ್ದಾರೆ. ಪ್ರಜ್ವಲ್ನ ಎಡಗೈ ಕಟ್ ಆಗಿ ಪ್ರಜ್ಞಾಹೀನನಾಗಿ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಡಿದ ಮತ್ತಿನಲ್ಲಿದ್ದ ಪ್ರಜ್ವಲ್, ಮೊದಲು ಪೊಲೀಸರ ಮುಂದೆ ಜೆಸಿಬಿ ಹೊಡೆದಿದ್ದರಿಂದ ಕೈ ಕಟ್ ಆಯ್ತು ಎಂದಿದ್ದ. ಕೆಲ ಗಂಟೆಗಳ ಬಳಿಕ ತನ್ನ ಮೇಲೆ ಗ್ಯಾಂಗೊಂದು ಹಲ್ಲೆ ನಡೆಸಿತ್ತು ಎಂದು ಹೇಳಿದ್ದಾನೆ. ನಂತರ ಕಟ್ ಆಗಿರುವ ಕೈ ಕೂಡಿಸಿ, ಅದನ್ನ ಹಲ್ಲೆ ಮಾಡಿದವರು ಎತ್ತಿಕೊಂಡು ಹೋಗಿರಬಹುದು ಎಂದು ಪೊಲೀಸರ ಮುಂದೆ ಪ್ರಜ್ವಲ್ ಹೇಳಿದ್ದನು.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿತ್ತು. ಸಿಸಿಟಿವಿ ವಿಡಿಯೋ ಪರಿಶೀಲಿಸಿದಾಗ ಹೊಡೆದಾಟದ ದೃಶ್ಯಗಳು ಸೆರೆಯಾಗಿವೆ. ಅದರ ಜೊತೆಗೆ ಕಟ್ ಆಗಿರೋ ಕೈಯನ್ನು ಹಲ್ಲೆ ನಡೆಸಿದವರು ತೆಗೆದುಕೊಂಡು ಹೋಗಿರಲಿಲ್ಲ. ಬದಲಿಗೆ ಅಲ್ಲೇ ಇದ್ದ ಬೀದಿ ನಾಯಿಯೊಂದು ಕೊಂಡೊಯ್ದಿತ್ತು. ತಕ್ಷಣ ಪೊಲೀಸರು ಡಾಗ್ ಸ್ಕ್ವಾಡ್ ಜೊತೆಗೆ ಆ ನಾಯಿ ಕೈ ತೆಗೆದುಕೊಂಡು ಹೋದ ದಿಕ್ಕಿನಲ್ಲಿ ಹುಡುಕಾಟ ನಡೆಸಿದರು. ಆದ್ರೆ ಅದು ಪ್ರಯೋಜನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ತೂಗು ಸೇತುವೆ ಮೇಲೆ ಕಾರು ಚಲಾಯಿಸಿ ದರ್ಪ: ಒಬ್ಬ ಯುವಕ ಪೊಲೀಸರ ವಶಕ್ಕೆ !