ಬೆಂಗಳೂರು :ಕ್ರಿಸ್ಮಸ್ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಸ್ನೇಹಿತನೊಂದಿಗೆ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡಲು ಬೈಕ್ನಲ್ಲಿ ತೆರಳುತ್ತಿದ್ದ ಯುವಕನೋರ್ವ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ವಿಧಾನಸೌಧ ಸಮೀಪ ಗೋಪಾಲಗೌಡ ಜಂಕ್ಷನ್ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಅಲೆಕ್ಸ್ (25) ಸಾವನ್ನಪ್ಪಿದ ಯುವಕ. ಆತನ ಸ್ನೇಹಿತ ಸತೀಶ್ ಎಂಬಾತನ ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕ್ರಿಸ್ಮಸ್ ಸಡಗರದಲ್ಲಿದ್ದ ಅಲೆಕ್ಸ್ ತನ್ನ ಸ್ನೇಹಿತನ ಜೊತೆ ರಾಜಾಜಿನ ನಗರದಿಂದ ಶಿವಾಜಿನಗರದ ಸೆಂಟ್ ಪ್ಯಾಟ್ರಿಕ್ ಚರ್ಚ್‌ಗೆ ಪ್ರಾರ್ಥನೆಗೆ ತೆರಳುತ್ತಿದ್ದ. ವಿಧಾನಸೌಧ ಮಾರ್ಗದಲ್ಲಿ ತೆರಳುತ್ತಿದ್ದಾಗ ಫುಟ್ಪಾತ್ ತಡೆಗೋಡೆಗೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಅಲೆಕ್ಸ್ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.